ಬಿಜೆಪಿ ಸಂಸದರ ಮೇಲೆ ಹಲ್ಲೆ ಆರೋಪ: ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್
ಹೊಸದಿಲ್ಲಿ: ಬಿಜೆಪಿ ಸಂಸದರ ಮೇಲೆ ಹಲ್ಲೆ ನಡೆಸಿದ ಆರೋಪದಂತೆ ಕಾಂಗ್ರೆಸ್ ಮುಖಂಡ, ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ದೆಹಲಿಯ ಸ್ಟ್ರೀಟ್ ಪೊಲೀಸರು ಎಫ್‌ಐಆರ್ ದಾಖಲಿಸಿ ದ್ದಾರೆ. ಸಂಸತ್‌ನಲ್ಲಿ ಗೃಹ ಸಚಿವ ಅಮಿತ್‌ಶಾ ಡಾ. ಅಂಬೇಡ್ಕರ್‌ರ ಬಗ್ಗೆ ನೀಡಿದ ಹೇಳಿಕೆ ವಿರುದ್ಧ ಸಂಸತ್‌ನ ಆವರಣದಲ್ಲಿ ಕಾಂಗ್ರೆಸ್ ನೇತಾರರು ಪ್ರತಿಭಟನೆ ನಿನ್ನೆ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಬಿಜೆಪಿಯೂ ಇನ್ನೊಂದೆಡೆ ಪ್ರತಿಭಟಿಸಿ ನೇತಾರರೂ ಪ್ರತಿಭಟನೆ ಆರಂಭಿಸಿದರು.
ಈವೇಳೆ ಉಭಯ ಪಕ್ಷಗಳ ನೇತಾರರ ನಡುವೆ ಜಟಾಪಟಿ ಉಂಟಾಗಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಸಂಸದ ಪ್ರತಾಪ್‌ಚಂದ್ರ ಸಾರಂಗಿ ಮತ್ತು ಮುಖೇಶ್ ರಜಪೂತ್ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದಕ್ಕೆ ಸಂಬಂಧಿಸಿ ಬಿಜೆಪಿ ಸಂಸದ ಅನುರಾಗ್ ಠಾಕೂರ್, ಹೇಮಂತ್ ಜೋಶಿ ಮತ್ತು ಬಾನ್ಸುರಿ ಸ್ವರಾಜ್ ನೀಡಿದ ದೂರಿನಂತೆ ಪೊಲೀಸರು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 109, 115, 117, 125, 131 ಮತ್ತು 351 ಅಡಿ ಈ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ 109 ಕೊಲೆಯತ್ನ ಮತ್ತು ಸೆಕ್ಷನ್ 117 ಸ್ವಯಂ ಪ್ರೇರಿತವಾಗಿ ತೀವ್ರಗಾಯ ಉಂಟುಮಾಡುವ ಸೆಕ್ಷನ್‌ಗಳಾಗಿವೆ.
ಸಂಸತ್‌ನ ಹೊರಗೆ ಕಾಂಗ್ರೆಸ್ ಮತ್ತ್ತು ಬಿಜೆಪಿ ಸಂಸದರ ಮಧ್ಯೆ ನಿನ್ನೆ ನಡೆದ ಜಟಾಪಟಿ ವೇಳೆ ರಾಹುಲ್ ಗಾಂಧಿ ತನ್ನನ್ನು ದೂಡಿಹಾಕಿದುದರಿಂದ ನಮಗೆ ಗಾಯವುಂಟಾಗಿದೆಯೆಂದು ಬಿಜೆಪಿ ಯ ಇಬ್ಬರು ಸಂಸದರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಸಂಸತ್‌ನಲ್ಲಿ ಬಿಜೆಪಿ ಗೂಂಡಾಗಿರಿ ನಡೆಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಕೂಡಾ ಸಂಸತ್‌ನ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಮಾತ್ರವಲ್ಲ ಬಿಜೆಪಿಯವರು ನನ್ನನ್ನು ದೂಡಿಹಾಕಿದರಿಂದ ನನ್ನ ಕೈಗೆ ಗಾಯವುಂಟಾಗಿದೆಯೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿ ರಂಗಕ್ಕಿಳಿದಿದ್ದಾರೆ.