ಅಕ್ರಮ ಮರಳು ಸಾಗಾಟ ದಂಧೆಗೆ ಸಹಾಯ ಒದಗಿಸಿದ ಆರೋಪ: ಏಳು ಪೊಲೀಸರ ವಿರುದ್ಧ ಶಿಸ್ತು ಕ್ರಮಕ್ಕೆ ಸಾಧ್ಯತೆ
ಕಾಸರಗೋಡು: ಅಕ್ರಮ ಮರಳುಗಾರಿಕೆ ದಂಧೆಯವರಿಗೆ ಕರ್ತವ್ಯ ನಿರತ ಪೊಲೀಸರ ಚಲನವಲನದ ಬಗ್ಗೆ ಮಾಹಿತಿ ರವಾನಿಸಿದ ಆರೋಪದಂತೆ ಜಿಲ್ಲೆಯ ಏಳು ಮಂದಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಇಲಾಖಾ ಮಟ್ಟದ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಈ ಆರೋಪ ಹೊತ್ತವರು ಮೇಲ್ಪರಂಬ ಮತ್ತು ಬೇಕಲ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರಾಗಿದ್ದಾರೆ. ಇದರಲ್ಲಿ ಇಬ್ಬರು ಪೊಲೀಸ್ ವಾಹನದ ಚಾಲಕರಾಗಿದ್ದಾರೆ. ಇವರ ಬಗ್ಗೆ ಡಿವೈಎಸ್‌ಪಿ ಮನೋಜ್ ಎ.ವಿ.ಯವರು ತನಿಖೆ ನಡೆಸಿ ಅಗತ್ಯದ ಮಾಹಿತಿ ಸಂಗ್ರಹಿಸಿ ಅದರ ವರದಿಯನ್ನು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗೆ ಈಗಾಗಲೇ ಸಲ್ಲಿಸಿದ್ದಾರೆ.
ಅಕ್ರಮ ಮರಳು ಸಾಗಾಟ ದಂಧೆಯಲ್ಲಿ ನಿರತರಾಗಿರುವವರ ಫೋನ್‌ಗಳನ್ನು ಪೊಲೀಸರು ಇತ್ತೀಚೆಗೆ ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಈ ಏಳು ಮಂದಿ ಪೊಲೀಸರ ನಂಬ್ರಗಳು ಲಭಿಸಿದೆ. ಅಕ್ರಮವಾಗಿ ಮರಳು ಸಾಗಿಸುವ ವೇಳೆ ಆ ದಾರಿಯಲ್ಲಿ ಕರ್ತವ್ಯದಲ್ಲಿರುವ ಪೊಲೀಸರ ಬಗ್ಗೆ ಈ ಪೊಲೀಸರು ಅಕ್ರಮ ಮರಳುಗಾರಿಕೆ ನಡೆಸುವವರಿಗೆ ಮಾಹಿತಿ ನೀಡುತ್ತಿದ್ದರೆಂದು ತನಿಖೆಯಲ್ಲಿ ಪತ್ತೆಹಚ್ಚಲಾಗಿತ್ತು.
ಮೇಲ್ಪರಂಬ ಮತ್ತು ಬೇಕಲ ಪೊಲೀಸ್ ಠಾಣೆಗಳ ವ್ಯಾಪ್ತಿಗೊಳಪಟ್ಟ ಕರಾವಳಿ ಪ್ರದೇಶಗಳಿಂದ ರಾತ್ರಿಯಿಂದ ಆರಂಭಗೊಂಡು ಮುಂಜಾನೆ ತನಕ ಅಕ್ರಮವಾಗಿ ಮರಳು ತೆಗೆದು ಸಾಗಿಸುವ ಹಲವು ತಂಡಗಳಿವೆ. ಹೀಗೆ ಮರಳುಗಾರಿಕೆ ನಡೆಸುವ ಹಾಗೂ ಅವುಗಳನ್ನು ಸಾಗಿಸುವ ವೇಳೆ ಪೊಲೀಸರ ಚಲನವಲನದ ಬಗ್ಗೆ ಆರೋಪ ಹೊತ್ತ ಈ ಪೊಲೀಸರು ಮರಳು ಸಾಗಾಟ ದಂಧೆಯವರಿಗೆ ಮಾಹಿತಿ ನೀಡುತ್ತಿದ್ದರೆಂದು ಆರೋಪಿಸಲಾಗುತ್ತಿದೆ.