15 ಅಡಿ ಎತ್ತರದ ಗ್ಯಾಲರಿಯಿಂದ ಕೆಳಕ್ಕೆ ಬಿದ್ದು ಕಾಂಗ್ರೆಸ್ ಶಾಸಕಿ ಗಂಭೀರ ಗಾಯ

ಕೊಚ್ಚಿ: ತೃಕ್ಕಾಕರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಉಮಾಥೋಮಸ್ ಅವರು ನಿನ್ನೆ ಕೊಚ್ಚಿ ಕಲೂರ್ ಜವಾಹರ್‌ಲಾಲ್ ಅಂತಾರಾಷ್ಟ್ರೀಯ ಕ್ರೀಡಾಂಗಣ ೧೫ ಅಡಿ ಎತ್ತರದಲ್ಲಿರುವ ಗ್ಯಾಲರಿಯಿಂದ  ಬಿದ್ದು ತಲೆ ಮತ್ತು ಬೆನ್ನುಮೂಳೆಗೆ ಗಂಭೀರ ಗಾಯ ಉಂಟಾಗಿದೆ. ಅವರನ್ನು ಪಾಲೇರಿವಟ್ಟಂ ರಿನೈ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ನಟಿ ದಿವ್ಯಾ ಉಣ್ಣಿಯವರ ನೇತೃತ್ವದಲ್ಲಿ ವಿಶ್ವದಾಖಲೆಯ ಗುರಿಯೊಂದಿಗೆ 12,000 ನೃತ್ಯಗಾ ರರು ಪಾಲ್ಗೊಂಡ ಭರತನಾಟ್ಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲೆಂದು ಉಮಾ ಥೋಮಸ್ ನಿನ್ನೆ ಜವಾಹರ್ ಲಾಲ್ ಕ್ರೀಡಾಂಗಣಕ್ಕೆ ಬಂದಿದ್ದರು. ಆ ವೇದಿಕೆಯಲ್ಲಿ ಸಾಂಸ್ಕೃತಿಕ ಖಾತೆ ಸಚಿವ ಸಜಿ ಚೆರಿಯಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಆ ವೇಳೆ ಆ ಗ್ಯಾಲರಿಯ ವೇದಿಕೆ ಅಂಚಿನಿಂದ ಉಮಾಥೋಮಸ್ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ವಿಷಯ ತಿಳಿದ ಕೋಟಯಂ ವೈದ್ಯಕೀಯ ಕಾಲೇಜು ಆಸ್ಪತ್ರೆ ತಜ್ಞವೈದ್ಯರು ಕೊಚ್ಚಿಯ ಆಸ್ಪತ್ರೆಗೆ ಆಗಮಿಸಿದ್ದಾರೆ. ಆರೋಗ್ಯ ಸಚಿವೆ ವೀಣಾ ಜೋರ್ಜ್ ನೀಡಿದ ನಿರ್ದೇಶ ಪ್ರಕಾರ ಉಮಾ ಥೋಮಸ್‌ರ ಚಿಕಿತ್ಸೆಗಾಗಿ ಪ್ರತ್ಯೇಕ ವೈದ್ಯಕೀಯ ತಂಡಕ್ಕೂ ರೂಪು ನೀಡಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿದ ಕಾಂಗ್ರೆಸ್ ನೇತಾರರು ಆಸ್ರತ್ರೆಗೆ ಆಗಮಿಸತೊಡಗಿ ದ್ದಾರೆ. ತೃಕ್ಕಾಕರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಪಿ.ಟಿ. ಥೋಮಸ್‌ರ ಹಠಾತ್ ನಿಧನದ ಬಳಿಕ ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಉಮಾ ಥೋಮಸ್‌ರನ್ನು ಕಾಂಗ್ರೆಸ್ ಸ್ಪರ್ಧೆಗಿಳಿಸಿತ್ತು.  ಪತಿ ನಿಧನದ ಅನುಕಂಪ ಅಲೆಯಿಂದಾಗಿ ಉಮಾ ಥೋಮಸ್ ೨೫,೦೧೬ ಮತಗಳ ಅಂತರದಲ್ಲಿ ಭಾರೀ ಗೆಲುವು ಸಾಧಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page