ರಾಜ್ಯದ ನೂತನ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಪ್ರಮಾಣ ವಚನ
ತಿರುವನಂತಪುರ: ಕೇರಳದ ಹೊಸ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ಇಂದು ಬೆಳಿಗ್ಗೆ ರಾಜ್ ಭವನ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿ ವಿದ್ಯುಕ್ತವಾಗಿ ಅಧಿಕಾರ ವಹಿಸಿಕೊಂಡರು. ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನಿತಿನ್ ಮಧುಕರ್ ಜಾಮ್‌ದಾರ್ ಅವರು ಆರ್ಲೆಕರ್‌ರಿಗೆ ಪ್ರಮಾಣವಚನ ಬೋಧಿಸಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪೀಕರ್ ಎಂ.ಎಂ. ಶಂಶೀರ್, ಹಲವು ಸಚಿವರುಗಳು, ವಿಪಕ್ಷ ನಾಯಕ ವಿ.ಡಿ. ಸತೀಶನ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್, ಹಾಗೂ ಉನ್ನತ ಸರಕಾರಿ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಿನ್ನೆ ಸಂಜೆ ಪತ್ನಿ ಅನಘಾ ಆರ್ಲೇಕರ್‌ರ ಜೊತೆ ವಿಮಾನದಲ್ಲಿ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಾಜೇಂದ್ರ ವಿಶ್ವನಾಥನ್ ಆರ್ಲೇಕರ್ ರನ್ನು ಅಲ್ಲಿ ಮುಖ್ಯಮಂತ್ರಿ, ವಿಧಾನಸಭಾ ಸ್ಪೀಕರ್ ಹಲವು ಸಚಿವರುಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಗಣ್ಯರು ಸ್ವಾಗತಿಸಿದರು.
ರಾಜ್ಯದ ಈ ಹಿಂದಿನ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್‌ರ ಮತ್ತು ರಾಜ್ಯ ಸರಕಾರದ ಸಂಬಂಧ ಅಷ್ಟೊಂದು ಉತ್ತಮವಾಗಿರಲಿಲ್ಲ. ಸರಕಾರದ ಹಲವು ಧೋರಣೆಗಳನ್ನು ಆರೀಫ್ ಮೊಹಮ್ಮದ್ ಖಾನ್ ನೇರವಾಗಿ ಪ್ರಶ್ನಿಸಿ ಅದರ ವಿರುದ್ಧ ರಂಗಕ್ಕಿಳಿದಿದ್ದರು. ಮಾತ್ರವಲ್ಲ ವಿಧಾನಸಭೆ ಅನುಮೋದನೆ ನೀಡಿದ ಹಲವು ವಿದೇಯಕಗಳಿಗೂ ಅವರು ಸಹಿ ಹಾಕುವಲ್ಲಿ ಹಿಂದೇಟು ಹಾಕಿದ್ದರು. ಅದು ಅವರ ಮತ್ತು ಸರಕಾರ ನಡುವಿನ ಉತ್ತಮ ಸಂಬಂಧವನ್ನು ಹದಗೆಡುವಂತೆ ಮಾಡಿತ್ತು. ಆ ವೇಳೆಯಲ್ಲೇ ಅವರನ್ನು ಕೇರಳದಿಂದ ಬಿಹಾರ ರಾಜ್ಯ ಪಾಲರನ್ನಾಗಿ ನೇಮಿಸಲು ಕೇಂದ್ರ ಸರಕಾರ ತೀರ್ಮಾನಿಸಿದ್ದು, ಅದು ಎಡರಂಗ ಸರಕಾರಕ್ಕೆ ಅಲ್ಪ ನೆಮ್ಮದಿ ನೀಡಿತ್ತು. ಆದರೆ ಈಗಿನ ಹೊಸ ರಾಜ್ಯಪಾಲರು ಮತ್ತು ಸರಕಾರದ ನಡುವಿನ ಸಂಬಂಧ ಮುಂದೆ ಹೇಗಿರಲಿದೆ ಎಂಬುದನ್ನು ನೋಡಬೇಕಾಗಿದೆ.