ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ: ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿ ಮೇಲಿನ ವಿಚಾರಣೆ ಪೂರ್ಣ; ತೀರ್ಪು ಅ.೧೦ಕ್ಕೆ
ಕಾಸರಗೋಡು: ಮಂಜೇಶ್ವರ ವಿಧಾನಸಭೆಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಲಂಚ ಸ್ವೀಕರಿಸಲಾಗಿದೆ ಎಂದು ಆರೋಪಿಸಿ ನೀಡಲಾದ ದೂರಿನಂತೆ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣವನ್ನು ರದ್ದುಪಡಿಸುವಂತೆ ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಮತ್ತು ಇತರ ನಾಲ್ವರು ಸಲ್ಲಿಸಿರುವ ಅರ್ಜಿ ಮೇಲಿನ ವಿಚಾರಣೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ನಿನ್ನೆ ಪೂರ್ಣಗೊಂಡಿದೆ. ಇದರ ತೀರ್ಪನ್ನು ನ್ಯಾಯಾಲಯ ಅಕ್ಟೋಬರ್ ೧೦ಕ್ಕೆ ಮೀಸಲಿರಿಸಿದೆ.
ಪ್ರಸ್ತುತ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿರುವ ಹಿನ್ನೆಯಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವ ವೇಳೆ ಆರೋಪಿಗಳು ನೇರವಾಗಿ ನ್ಯಾಯಾಲಯದಲ್ಲಿ ಹಾಜರಾಗಬೇಕಾದ ಅಗತ್ಯವಿದೆಯೇ ಎಂಬುವುದರ ಬಗ್ಗೆಯೂ ಅ. ೧೦ರಂದು ನ್ಯಾಯಾಲಯ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಪ್ರಸ್ತುತ ಪ್ರಕರಣವನ್ನು ನ್ಯಾಯಾಲಯ ಈ ಹಿಂದೆ ಪರಿಗಣಿಸಿದಾಗ ಅಂದು ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ. ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳು ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗುವ ಅಗತ್ಯವಿಲ್ಲವೆಂದು ಅಂದು ಆರೋಪಿಗಳ ಪರವಾಗಿ ವಾದಿಸಿದ ಅವರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಅದರಿಂದಾಗಿ ಪ್ರಸ್ತುತ ಅರ್ಜಿಯ ಮುಂದಿನ ಹಂತದ ವಿಚಾರಣೆಯನ್ನು ನ್ಯಾಯಾಲಯ ನಿನ್ನೆಗೆ ಮುಂದೂಡಿತ್ತು. ಬಳಿಕ ನಿನ್ನೆ ಅದರ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಅದರ ತೀರ್ಪನ್ನು ನ್ಯಾಯಾಲಯ ಅ.೧೦ಕ್ಕೆ ಮೀಸಲಿರಿಸಿತು.
ಕಳೆದ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭೆಯಲ್ಲಿ ಬಿ.ಎಸ್.ಪಿ. ಉಮೇದ್ವಾರರಾಗಿ ಸ್ಪರ್ಧಿಸಿದ್ದ ಕೆ. ಸುಂದರನವರೂ ನಿನ್ನೆ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ನಿಮ್ಮ ಪರ ವಾದಿಸಲು ವಕೀಲರು ಇದ್ದಾರೆಯೇ ಎಂದು ನ್ಯಾಯಾಧೀಶರು ಅವರನ್ನು ಪ್ರಶ್ನಿಸಿದಾಗ, ಇಲ್ಲ, ನನ್ನ ಪರವಾಗಿ ನಾನೇ ಸ್ವತಃ ವಾದಿಸುವೆನೆಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಮಂಜೇಶ್ವರ ವಿಧಾನಸಭೆಗೆ ಕಳೆದ ಬಾರಿ ಚುನಾವಣೆ ನಡೆದಾಗ ಅಂದು ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಸುಂದರ ನಾಮಪತ್ರವನ್ನು ಹಿಂತೆಗೆದುಕೊಳ್ಳಲು ಅವರಿಗೆ ಹಣ ಮತ್ತು ಮೊಬೈಲ್ ಪೋನ್ ನೀಡಲಾಗಿತ್ತು ಎಂದು ಆರೋಪಿಸಿ ನೀಡಲಾದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದರು.