ಸಾರಿಗೆ ಕಾನೂನು ಉಲ್ಲಂಘಿಸಿದಲ್ಲಿ ಡ್ರೈವಿಂಗ್ ಲೈಸನ್ಸ್‌ನಲ್ಲಿ ‘ಬ್ಲಾಕ್ ಮಾರ್ಕ್’
ಕಾಸರಗೋಡು: ಸಾರಿಗೆ ಕಾನೂನು ಉಲ್ಲಂಘಿಸಿ ವಾಹನ ಚಲಾಯಿಸಿದಲ್ಲಿ ಅಂತಹ ವಾಹನ ಚಾಲಕರ ಲೈಸನ್ಸ್‌ನಲ್ಲಿ ‘ಬ್ಲಾಕ್ ಮಾರ್ಕ್’ (ಕಪ್ಪುಚುಕ್ಕಿ) ಬೀಳಲಿದೆ ಮಾತ್ರವಲ್ಲ ಆರು ಬಾರಿ ಸಾರಿಗೆ ಕಾನೂನು ಉಲ್ಲಂಘಿಸಿದಲ್ಲಿ ಲೈಸನ್ಸ್ ಒಂದು ವರ್ಷದ ಅವಧಿಗೆ ರದ್ದುಪಡಿಸಲಾಗುವುದು.
ಇಂತಹ ನೂತನ ಕ್ರಮ ಜ್ಯಾರಿ ಗೊಳಿಸುವಿಕೆಯ ಕುರಿತಾದ ಪ್ರಾಥಮಿಕ ಚರ್ಚೆಯನ್ನು ಸಾರಿಗೆ ಇಲಾಖೆ ಆರಂ ಭಿಸಿದೆ. ರಾಜ್ಯದಲ್ಲಿ ಈಗ ಡಿಜಿಟಲ್ ಲೈಸನ್ಸ್ ನೀಡಲಾಗುತ್ತಿದೆ. ಅದರಿಂದಾಗಿ ಸಾರಿಗೆ ಕಾನೂನು ಉಲ್ಲಂಘಿಸುವವರ ವಿರುದ್ಧ ಈ ನೂತನ ಕ್ರಮ ಕೈಗೊಳ್ಳುವ ಕೆಲಸ ಅತ್ಯಂತ ಸುಲಭವಾಗಲಿದೆ ಎಂದು ಸಾರಿಗೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಹೊಸ ಲೈಸನ್ಸ್ ಪಡೆಯುವವರಿಗೆ ಇನ್ನು ಎರಡು ವರ್ಷ ಪ್ರೊಬೇಷನ್ (ಪರೀಕ್ಷಾ ಅವಧಿ) ನೀಡುವ ವಿಷಯವೂ ಸಾರಿಗೆ ಇಲಾಖೆಯ ಪರಿಶೀಲನೆಯಲ್ಲಿದೆ. ಇದರಂತೆ ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾ ದವರು ಮೊದಲ ಒಂದು ವರ್ಷ ಚಲಾಯಿಸುವ ವಾಹನದಲ್ಲಿ ‘ಪಿ-೧’ ಎಂಬ ಸ್ಟಿಕ್ಕರ್ ಲಗತ್ತಿಸಲಾಗುವುದು. ಎರಡನೇ ವರ್ಷ ಅಂತಹ ವಾಹನಗಳಿಗೆ ‘ಪಿ-2’ ಸ್ಟಿಕ್ಕರ್ ಲಗತ್ತಿಸಲಾಗುವುದು. ಈ ರೀತಿ ಸ್ಟಿಕ್ಕರ್ ಲಗತ್ತಿಸುವ ಮೂಲಕ ವಾಹನ ಚಲಾಯಿಸುವವರ ಡ್ರೈವಿಂಗ್ ಅನುಭವ ಗುರುತಿಸಲಾಗುವುದು. ಪ್ರೊಬೇಷನ್ ಅವಧಿಯಲ್ಲಿ ಹತ್ತು ಬಾರಿ ಸಾರಿಗೆ ಕಾನೂನು ಉಲ್ಲಂಘಿಸಿದಲ್ಲಿ ಅಂತವರ ಲೈಸನ್ಸ್ ರದ್ದುಪಡಿ ಸಲಾಗುವುದು. ಇವರು ಮೊದಲ ಬಾರಿ ಕಾನೂನು ಉಲ್ಲಂಘಿಸಿದ್ದಲ್ಲಿ ಅವರಿಗೆ ಮುನ್ನೆಚ್ಚರಿಕೆ ನೀಡಲಾಗುವುದು. ಅನಂತರವೂ ತಪ್ಪೆಸಗಿದಲ್ಲಿ ಅವರ ವಿರುದ್ಧ ಅಗತ್ಯದ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ತಿಳಿಸಿದ್ದಾರೆ. ಕೇರಳದಲ್ಲಿ ಲೈಸನ್ಸ್ ಪಡೆಯಲು ಸಾಧ್ಯವಾಗದ ಹಲವರು ಹೊರ ರಾಜ್ಯಗಳಿಗೆ ಹೋಗಿ ಅಲ್ಲಿಂದ ಡ್ರೈವಿಂಗ್ ಲೈಸನ್ಸ್ ಪಡೆಯುತ್ತಿದ್ದು, ಅದನ್ನು ಪರಿಶೀಲಿಸುವಂತೆ ಅಂತಹ ರಾಜ್ಯಗಳೊಂದಿಗೆ ಕೇಳಿಕೊಳ್ಳಲಾಗು ವುದೆಂದು ಸಚಿವರು ತಿಳಿಸಿದ್ದಾರೆ.