ವಿಧಾನಸಭಾ ಅಧಿವೇಶನ ಆರಂಭ: ನವಕೇರಳ ಗುರಿಯತ್ತ ದಾಪುಗಾಲು; ಎಲ್ಲರಿಗೂ ನಿವೇಶನ-ರಾಜ್ಯಪಾಲ
ತಿರುವನಂತಪುರ: ರಾಜ್ಯ ಸರಕಾರದ ನೀತಿ ಘೋಷಣೆಯ ಕುರಿತಾದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ರ ಭಾಷಣದೊಂದಿಗೆ ಕೇರಳ ವಿಧಾನ ಸಭೆಯ ಹದಿನೈದನೇ ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಿತು.
ರಾಜೇಂದ್ರ ಅರ್ಲೇಕರ್ ಕೇರಳದ ರಾಜ್ಯಪಾಲರಾದ ಬಳಿಕ ವಿಧಾನಸಭೆಯನ್ನುದ್ದೇಶಿಸಿ ನಡೆಸಿದ ಮೊದಲ ಭಾಷಣ ಇದಾಗಿದೆ. ತಮ್ಮ ಭಾಷಣ ರಾಜ್ಯ ಸರಕಾರದ ಪ್ರತಿಯೊಂದು ಭರವಸೆಗಳನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಎಳೆ ಎಳೆಯಾಗಿ ಬಿಡಿಸಿ ಹೇಳಿದರು.
ಕೇರಳ ನವಕೇರಳ ಗುರಿಯತ್ತ ದಾಪುಗಾಲು ಹಾಕುತ್ತಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರಕಾರ ಪ್ರಥಮ ಆದ್ಯತೆ ನೀಡುತ್ತಿದೆ. ಜನರಿಗೆ ನೀಡಲಾದ ಭರವಸೆಗಳನ್ನೆಲ್ಲಾ ಸರಕಾರ ಪಾಲಿಸುತ್ತಾ ಬಂದಿದೆ. ಬಡತನ ನಿವಾರಣೆಗೆ ಸರಕಾರ ಆದ್ಯತೆ ನೀಡುತ್ತಿದೆ. ಸ್ವಂತವಾಗಿ ಮನೆ ಇಲ್ಲದವರಿಗೆ ನಿವೇಶನ ಖಾತರಿಪಡಿಸಲಾಗುವುದು. ರಾಜ್ಯದಲ್ಲಿ ೬೪,೦೦೬ ಕಡು ಬಡವರನ್ನು ಗುರುತಿಸಲಾಗಿದ್ದು, ಅವರ ಸಮಸ್ಯೆಗಳಿಗೆ ಪರಿಹಾರ ಕಂಡಕೊಳ್ಳಲಾಗುವುದು.
ಆರೋಗ್ಯ ಮತ್ತು ಶಿಕ್ಷಣ ವಲಯಗಳಲ್ಲಿ ಕೇರಳ ಭಾರೀ ಪ್ರಗತಿ ಹಂತದತ್ತ ಸಾಗುತ್ತಿದೆ. ಇಂಟರ್ನೆಟ್ನ್ನು ಸಾರ್ವತ್ರಿಕಗೊಳಿಸುವುದರಿಂದ ಆರಂಭಗೊಂಡು ಡಿಜಿಟಲ್ ಸರ್ವೇ ಪೂರ್ತಿಗೊಳಿಸುವ ಮೂಲಕ ರಾಜ್ಯ ಉತ್ತಮ ಸಾಧನೆತ್ತ ಮುನ್ನುಗ್ಗುತ್ತಿದೆ. ಕಡು ಬಡತನದ ನಿವಾರಣೆಗೆ ಮತ್ತು ಶಿಕ್ಷಣ ರಂಗದಲ್ಲಿ ಕೇರಳ ನಡೆಸಿದ ಮಹತ್ತರ ಸಾಧನೆಗಳು ಒತ್ತುನೀಡಿ ಹೇಳಬೇಕಾದ ವಿಷಯಗಳಾಗಿವೆ.
ಕೇಂದ್ರ ಸರಕಾರದ ಸಹಭಾಗಿತ್ವ ದಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಶರವೇಗದಲ್ಲಿ ಮುಂದುವರಿಯುತ್ತಿದೆ. ಸಾಮಾಜಿಕ ಭದ್ರತೆ ಖಾತರಿಪಡಿಸುವಲ್ಲಿ ಕೇರಳ ಉತ್ತಮ ನಿರ್ವಹಣೆ ತೋರಿದೆ. ವಯನಾಡು ದುರಂತದ ಸಂತ್ರಸ್ತರಿಗೆ ಪುನರ್ವಸತಿ ಖಾತರಿಪಡಿಸಲು ಸರಕಾರ ಕಟಿಬದ್ಧವಾಗಿದೆ. ಮುಂದಿನ ಒಂದು ವರ್ಷದೊಳಗಾಗಿ ವಯನಾಡು ಟೌನ್ಶಿಪ್ ನಿರ್ಮಾಣ ಪೂರ್ತಿಗೊಳಿಸಲಾಗುವುದು. ಆರೋಗ್ಯ ಮತ್ತು ಶಿಕ್ಷಣ ರಂಗದಲ್ಲಿ ಕೇರಳ ಸದಾ ಮುಂದಿದೆ. ಕೇರಳದ ಆರ್ಥಿಕ ಸಂಪನ್ಮೂಲ ಮಿತವಾಗಿ ದ್ದರೂ ಅದರ ಚೌಕಟ್ಟಿನೊಳಗೆ ರಾಜ್ಯವನ್ನು ಪ್ರಗತಿಯತ್ತ ಸಾಗಿಸುವ ಪ್ರಯತ್ನ ಸರಕಾರ ನಡೆಸುತ್ತಿದೆಯೆಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದರು.