ಹೊಳೆ ನೀರಿನ ಸೆಳೆತಕ್ಕೆ ಸಿಲುಕಿ ದಂಪತಿ, ಇಬ್ಬರು ಮಕ್ಕಳ ದಾರುಣ ಮೃತ್ಯು
ಚೆರುತ್ತಿರುತ್ತಿ: ಹೊಳೆ ನೀರಿನ ಸೆಳೆತದಲ್ಲಿ ಸಿಲುಕಿ ದಂಪತಿ ಮತ್ತು ಇಬ್ಬರು ಮಕ್ಕಳು ಸೇರಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಚೆರುವತ್ತೂರಿನಲ್ಲಿ ನಡೆದಿದೆ.
ಚೆರುವತ್ತುರುತ್ತಿ ಒಡಕ್ಕಲ್ ವೀಟಿಲ್ ಕಬೀರ್ (47) ಅವರ ಪತ್ನಿ ಶಾಹಿನ (35), ಪುತ್ರಿ ಸೌರಾ(10) ಮತ್ತು ಶಾಹಿನರ ಸಹೋದರಿ ಪುತ್ರ ಫುವಾದ್ ಸನಿನ್ (12) ಸಾವನ್ನಪ್ಪಿದ ದುರ್ದೈವಿಗಳು. ಈ ನಾಲ್ಕು ಮಂದಿ ಸೇರಿ ಅವರ ಕುಟುಂಬದವರು ನಿನ್ನೆ ಸಂಜೆ ಚೆರುತುರುತ್ತಿ ಪೈಕುಳಂ ಸ್ಮಶಾನಂ ಕಡವಿನ ಬಳಿಯ ಭಾರತ ಹೊಳೆ ಬಳಿ ಅದರ ಪ್ರಕೃತಿ ರಮಣೀಯ ಆಸ್ವಾದಿಸಲು ಹೋಗಿದ್ದರು. ಆ ವೇಳೆ ಅವರು ಹೊಳೆಗೆ ಇಳಿದಾಗ ಹೊಳೆ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ. ಇದನ್ನು ಕಂಡ ಜತೆಗಿದ್ದವರು ಬೊಬ್ಬಿಟ್ಟಾಗ ಊರವರು ಆಗಮಿಸಿ ಮೊದಲು ಶಾಹಿನರನ್ನು ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ನಂತರ ಅಗ್ನಿಶಾಮಕ ದಳ, ಪೊಲೀಸರು ಮತ್ತು ಊರವರು ಸೇರಿ ಸತತ ಎರಡು ತಾಸುಗಳ ತನಕ ನಡೆಸಿದ ಶೋಧದಲ್ಲಿ ಮೃತದೇಹಗಳನ್ನು ಪತ್ತೆಹಚ್ಚಲಾಯಿತು.