ಪೈವಳಿಕೆ ಬಳಿ ಮನೆಯಿಂದ 7 ಪವನ್ ಚಿನ್ನಾಭರಣ, 1 ಲಕ್ಷ ರೂ. ಕಳವು; ಕಪಾಟಿನಲ್ಲಿ ನಕಲಿಚಿನ್ನವಿರಿಸಿ ಅಸಲಿ ಚಿನ್ನಾಭರಣ ದೋಚಿದ ಕಳ್ಳರು
ಉಪ್ಪಳ: ಮನೆಯ ಕಪಾಟಿನಲ್ಲಿ ನಕಲಿ ಚಿನ್ನಾಭರಣ ಇರಿಸಿ ೭ ಪವನ್ ಅಸಲಿ ಚಿನ್ನಾಭರಣಗಳನ್ನು ಹಾಗೂ ೧ ಲಕ್ಷ ರೂಪಾಯಿಯನ್ನು ದೋಚಿದ ಘಟನೆ ವರದಿಯಾಗಿದೆ.
ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕಳಾಯಿ ಎಂಬಲ್ಲಿನ ಕೃಷಿಕರಾದ ಸಂಜೀವ ಶೆಟ್ಟಿಯವರ ಮನೆಯಿಂದ ನಗ-ನಗದು ಕಳವಿಗೀಡಾಗಿದೆ. ಮನೆಯಲ್ಲಿ ಸಂಜೀವ ಶೆಟ್ಟಿ ಹಾಗೂ ಮನೆ ಕೆಲಸದಾಳುವಾದ ಕರ್ನಾಟಕ ನಿವಾಸಿಯೋರ್ವ ಮಾತ್ರವೇ ಇದ್ದಾರೆ. ಸಂಜೀವ ಶೆಟ್ಟಿಯವರ ಪುತ್ರ ಅಶೋಕ್ ಕುಮಾರ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅವರು ಮೊನ್ನೆ ಮನೆಗೆ ಆಗಮಿಸಿದ್ದಾರೆಯ ಅವರು ಮನೆಯ ಕೊಠಡಿಯಲ್ಲಿರುವ ಕಪಾಟು ತೆರೆದು ನೋಡಿದಾಗ ಅದರಲ್ಲಿದ್ದ 1 ಲಕ್ಷ ರೂಪಾಯಿ ಕಳವಿಗೀಡಾಗಿರುವುದು ತಿಳಿದುಬಂದಿದೆ. ಅಲ್ಲದೆ ಕಪಾಟಿನಲ್ಲಿದ್ದ ಸುಮಾರು ೭ ಪವನ್ ತೂಕದ ನಾಲ್ಕು ಚಿನ್ನದ ಬಳೆಗಳ ಮೇಲೆ ಸಂಶಯವುಂಟಾಗಿ ಪರಿಶೀಲಿಸಿದಾಗ ಅವುಗಳು ನಕಲಿ ಚಿನ್ನವೆಂದು ತಿಳಿದುಬಂದಿದೆ. ಕಳ್ಳರು ನಕಲಿ ಚಿನ್ನದ ಬಳೆಗಳನ್ನು ಕಪಾಟಿನಲ್ಲಿರಿಸಿ ಅದೇ ರೀತಿಯ ಅಸಲಿ ಚಿನ್ನದ ಬಳೆಗಳನ್ನು ದೋಚಿರುವುದಾಗಿ ಇದರಿಂದ ಅಂದಾಜಿಸಲಾಗಿದೆ.ಈ ಬಗ್ಗೆ ಅಶೋಕ್ ಕುಮಾರ್ ಶೆಟ್ಟಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ವೇಳೆ ಮನೆ ಕೆಲಸದಾಳುವಾದ ಕರ್ನಾಟಕ ನಿವಾಸಿ ಜನವರಿ ೨೮ರಂದು ಊರಿಗೆ ತೆರಳಿದ್ದಾನೆಂದೂ ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಆತನನ್ನು ಇಲ್ಲಿಗೆ ಕರೆಸಿ ತನಿಖೆ ನಡೆಸಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.