ಚೀಮೇನಿಯ ಮನೆಯಿಂದ ಕಳವು: 4 ಮಂದಿ ಕಳ್ಳರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಪತ್ತೆ: ತನಿಖೆ ನೇಪಾಳಕ್ಕೆ ವಿಸ್ತರಣೆ
ಕಾಸರಗೋಡು: ಚೀಮೇನಿಯ ನಿಡುಂಬ ಎಂಬಲ್ಲಿ ಸಿವಿಲ್ ಇಂಜಿನಿಯರ್ ಮುಕೇಶ್ ಎಂಬವರ ಮನೆಯಿಂದ 40 ಪವನ್ ಚಿನ್ನಾಭರಣ ಹಾಗೂ ನಾಲ್ಕು ಬೆಳ್ಳಿ ಪಾತ್ರೆಗಳನ್ನು ಕಳವುಗೈದ ತಂಡವನ್ನು ಸೆರೆಹಿಡಿಯಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮನೆಯಲ್ಲಿ ಕೆಲಸಕ್ಕಾಗಿ ತಲುಪಿದ ನೇಪಾಳ ನಿವಾಸಿಗಳಾದ ದಂಪತಿಯನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಓರ್ವೆ ಮಹಿಳೆ ಸಹಿತ ನಾಲ್ಕು ಮಂದಿ ಮನೆಯಿಂದ ಕಳವು ನಡೆಸಿರುವುದಾಗಿ ತಿಳಿದುಬಂದಿದೆ. ಈ ತಂಡ ಮನೆಗೆ ನಡೆದುಬರುವ ದೃಶ್ಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಪತ್ತೆಯಾಗಿದೆ. ಇಬ್ಬರು ಮನೆಯ ಹೊರಗೆ ಕಾವಲು ನಿಂತು ಮತ್ತಿಬ್ಬರು ಮನೆಯೊಳಗೆ ನುಗ್ಗುತ್ತಿರುವುದು ಕ್ಯಾಮರಾದಲ್ಲಿ ಕಂಡುಬರುತ್ತಿದೆ.
ಚಾಕ್ರಶಾಹಿ, ಇಷಾ ಚೌದರಿ ಅಗರ್ವಾಲ್ ಎಂಬವರು ಎಂಟು ತಿಂಗಳ ಹಿಂದೆ ಮುಕೇಶ್ರ ಮನೆಯಲ್ಲಿ ಹಸುಗಳ ಸಾಕಣೆ ಕೆಲಸಕ್ಕಾಗಿ ನೇಮಕಗೊಂಡಿದ್ದರು. ಗುಜರಾತ್ನಲ್ಲಿ ಕೆಲಸ ನಿರ್ವಹಿಸುವ ಮುಕೇಶ್ ಹಾಗೂ ಪತ್ನಿ ಕಣ್ಣೂರಿನಲ್ಲಿ ಕುಟುಂಬ ಮನೆಗೆ ಹೋದ ಬೆನ್ನಲ್ಲೇ ಮನೆಯಿಂದ ಕಳವು ನಡೆದಿದೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ಮನೆಯ ಹಿಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ಬೆಳ್ಳಿ ಪಾತ್ರೆಗಳನ್ನು ಕಳವು ನಡೆಸಿದ್ದರು. ಬಳಿಕ ಕಳ್ಳರು ಆಟೋ ರಿಕ್ಷಾದಲ್ಲಿ ಪ್ರಯಾಣಿಸಿ ಕಣ್ಣಾಡಿಪಾರಕ್ಕೆ ತಲುಪಿದ್ದರು. ಅಲ್ಲಿಂದ ಬೇರೊಂದು ಆಟೋ ರಿಕ್ಷಾದಲ್ಲಿ ನೀಲೇಶ್ವರಕ್ಕೆ ತೆರಳಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಕಳ್ಳರು ಯಾವುದೇ ರೈಲು ನಿಲ್ದಾಣಕ್ಕೆ ತಲುಪಿಲ್ಲವೆಂದು ಖಚಿತಗೊಂಡಿದೆ. ಆದ್ದರಿಂದ ಅವರು ಈಗಲೂ ಕೇರಳದಲ್ಲೇ ಇದ್ದಾರೆ ಎಂದು ಪೊಲೀಸರು ಅಂದಾಜಿಸಿ ದ್ದಾರೆ. ತನಿಖೆಯಂಗವಾಗಿ ಈಗಾಗಲೇ ನೇಪಾಳ ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ಡಿವೈಎಸ್ಪಿ ಬಾಬು ಪೆರಿಂಙೋತ್ತ್ರ ಮೇಲ್ನೋಟದಲ್ಲಿ ಚೀಮೇನಿ ಸಿಐ ಅನಿಲ್ ಕುಮಾರ್, ಎಸ್ಐ ರಮೇಶ್ ಒಳಗೊಂಡ ಪ್ರತ್ಯೇಕ ತಂಡ ತನಿಖೆ ನಡೆಸುತ್ತಿದೆ.