ಕೊಳತ್ತೂರು: ಗುಹೆಯೊಳಗೆ ಅವಿತಿದ್ದ ಚಿರತೆ ಪರಾರಿ; ವಿವಿಧೆಡೆ ಶೋಧ
ಕಾಸರಗೋಡು: ಕೊಳತ್ತೂರಿನಲ್ಲಿ ಗುಹೆಯೊಳಗೆ ಚಿರತೆಯೊಂದು ಕಾಣಿಸಿಕೊಂಡಿದ್ದು ಅರಣ್ಯಾಧಿಕಾರಿಗಳು ತಲುಪಿ ಶೋಧ ನಡೆಸುವಷ್ಟರಲ್ಲಿ ಅದು ಪರಾರಿಯಾಗಿದೆ.
ಕೊಳತ್ತೂರು ಮಡಂದಕ್ಕೋಡ್ ಎಂಬಲ್ಲಿ ಚಿರತೆ ಕಂಡು ಬಂದ ಬಗ್ಗೆ ನಾಗರಿಕರು ನೀಡಿದ ದೂರಿನಂತೆ ವಯನಾಡ್‌ನಿಂದ ವೈದ್ಯರು ಒಳಗೊಂಡ ತಂಡ ತಲುಪಿ ಶೋಧ ಆರಂಭಿಸಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಚಿರತೆ ಇರುವ ಸ್ಥಳವನ್ನು ಗುರುತಿಸಿ ತಂಡ ಮಾದಕಗುಂಡು ಹಾರಿಸಿತ್ತು. ಅಷ್ಟರಲ್ಲಿ ಚಿರತೆ ಅಲ್ಲಿಂದ ಓಡಿ ಹೋಗಿದೆ. ಗುಂಡು ಚಿರತೆಗೆ ತಾಗಿರಬಹುದೆಂದು ಅಂದಾ ಜಿಸಲಾಗಿದೆ. ನಿನ್ನೆ ಸಂಜೆ ಚಾಳಕ್ಕೋಡ್ ಮಡಂದಕ್ಕೋಡ್ ಎಂಬಲ್ಲಿನ ಕಂಗಿನ ತೋಟದ ಸಮೀಪ ಗುಹೆಯೊಳಗೆ ಚಿರತೆ ಇರುವುದು ಅರಿವಿಗೆ ಬಂದಿದೆ. ಗುಹೆಯಿಂದ ಘರ್ಜನೆ ಕೇಳಿದ ಹಿನ್ನೆಲೆಯಲ್ಲಿ ಸ್ಥಳೀಯರು ನೋಡಿದಾಗ ಚಿರತೆ ಕಾಣಿಸಿದೆ. ವಿಷಯ ತಿಳಿದು ತಲುಪಿದ ಅರಣ್ಯಾಧಿಕಾರಿಗಳು ಗುಹೆಗೆ ಬಲೆ ಕಟ್ಟಿದ್ದರು. ಅನಂತರ ವಯನಾಡ್‌ನಿಂದ ತಲುಪಿದ ತಂಡ ಕಾರ್ಯಾಚರಣೆ ಆರಂಭಿಸಿದೆ. ಈ ಪ್ರದೇಶದಲ್ಲಿ ನಿರಂತರವಾಗಿ ಚಿರತೆ ಕಾಣಿಸುತ್ತಿರುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ. ಡಿಎಫ್ ಕೆ. ಅಶ್ರಫ್, ರೇಂಜ್ ಆಫೀಸರ್ ಸಿ.ವಿ. ವಿನೋದ್ ಕುಮಾರ್ ಮೊದಲಾದವರು ಸ್ಥಳಕ್ಕೆ ತಲುಪಿದ್ದಾರೆ. ಚಿರತೆ ಓಡಿ ಹೋಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.