ಎರಡನೇ ಪತ್ನಿ ನಾಲ್ಕನೇ ಪತ್ನಿಯ  ಫೇಸ್‌ಬುಕ್ ಫ್ರೆಂಡ್ ಆದಾಗ ಹೊರಬಂತು ಪತಿಯ ಬಹುಪತ್ನಿತ್ವ ನಾಟಕ: ಆರೋಪಿ ಬಂಧನ 

ಕಾಸರಗೋಡು: ಫೇಸ್ ಬುಕ್ ಫ್ರೆಂಡ್ಸ್ ಆದ ಯುವತಿಯರಿಬ್ಬರು ತಮ್ಮ ಕಷ್ಟಸುಖಗಳ ವಿಚಾರಗಳನ್ನು ಪರಸ್ಪರ ರವಾನಿಸುತ್ತಿದ್ದ ವೇಳೆ ಅವರಿಬ್ಬರ ಪತಿ ಓರ್ವನೇ ಆಗಿರುವುದಾಗಿ ತಿಳಿದುಬಂದಿದೆ.  ಮಾತ್ರವಲ್ಲದೆ ಪತಿ ಗುಪ್ತವಾಗಿ ಇನ್ನೂ ಇಬ್ಬರು ಯುವತಿಯರನ್ನು ಮದುವೆಯಾಗಿ  ವಂಚಿಸಿದ  ನಿಗೂಢ ಕತೆಗಳು ಬಹಿರಂಗಗೊಂಡಿದೆ.  ಬಳಿಕ ಆ ಬಗ್ಗೆ ನಾಲ್ಕನೇ ಪತ್ನಿ  ನೀಡಿದ ದೂರಿನಂತೆ ಆ ಬಹುಪತ್ನಿ ವಲ್ಲಭನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ ಸ್ವಾರಸ್ಯಕರ ಘಟನೆ ನಡೆದಿದೆ.

ಮೂಲತಃ ವೆಳ್ಳರಿಕುಂಡು ನಿವಾಸಿ ಹಾಗೂ ಈಗ ಪತ್ತನಂತಿಟ್ಟ ಕೊನ್ನಿ ಪ್ರಮಾಡಂ ಪುಳಿಮುಖ್ ತೇಜಸ್  ಪ್ಲಾಟ್‌ನಲ್ಲಿ ವಾಸಿಸುತ್ತಿರುವ  ದೀಪು ಫಿಲಿಪ್ (36) ಬಂಧಿತನಾದ ಬಹುಪತ್ನೀ ವಲ್ಲಭನಾಗಿದ್ದಾನೆ. ಈತನ ವಿರುದ್ಧ ನಾಲ್ಕನೇ ಪತ್ನಿ  ಕೋನ್ನಿ ನಿವಾಸಿ ನೀಡಿದ ದೂರಿನಂತೆ ಕೋನ್ನಿ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ನಾನೋರ್ವ ಅನಾಥ. ನಾನು ಏಕಾಂಗಿ ಯಾಗಿ ಜೀವಿಸುತ್ತಿದ್ದೇನೆ.  ಏಕಾಂಗಿತನದಿಂದಾಗಿ ನಾನು ಅನುಭವಿಸುತ್ತಿರುವ ಮಾನಸಿಕ ಸಂಕಟ ಯಾರಿಗೂ ಅರಿವಾಗುತ್ತಿಲ್ಲವೆಂದು ನಟಿಸಿ ತನ್ನ ಆತಂಕ, ಕಪಟ ಅಳಲುಗಳನ್ನು ಹದಿಹರೆಯದ ಯುವತಿಯ ಮುಂದೆ ಪ್ರಕಟಿಸಿ ಆ ಮೂಲಕ  ಅವರ ಸಹಾನುಭೂತಿ ಪಡೆದು ಅವರನ್ನು ತಮ್ಮ ಬಲೆಗೆ ಬೀಳಿಸಿ ಮದುವೆಯಾಗುವುದು ಆತನ ರೀತಿಯಾಗಿದೆಯೆಂದು ಪೊಲೀಸರು ಹೇಳುತ್ತಿದ್ದಾರೆ. ಹೀಗೆ ತನ್ನ ಕಪಟ ನಾಟಕದ ಬಲೆಗೆ ಬಿದ್ದ ಯುವತಿಯರನ್ನು ಮದುವೆಯಾಗಿ ಕೆಲವು ಸಮಯ ಅವರೊಂದಿಗೆ ವಾಸಿಸಿ  ಸುಖ ಅನುಭವಿಸಿದ ಬಳಿಕ ಅವರ ನಗ-ನಗದನ್ನು ಪಡೆದು ಅಪ್ರತ್ಯಕ್ಷನಾಗಿ ಇತರ ಯುವತಿ ಯರಾಗಿ ಇದೇ ರೀತಿ ಗಾಳ ಹಾಕುವುದು ಈತನ ವಂಚನಾ ರೀತಿಯಾಗಿದೆಯೆಂದು ಪೊಲೀಸರು  ಹೇಳುತ್ತಿದ್ದಾರೆ.

ಹತ್ತು ವರ್ಷದ ಹಿಂದೆ ಈತ ವೆಳ್ಳರಿಕುಂಡು ನಿವಾಸಿಯಾಗಿರುವ ಯುವತಿಯನ್ನು  ಮೊದಲು ಮದುವೆಯಾಗಿದ್ದನು. ಆ ದಾಂಪತ್ಯದಲ್ಲಿ  ಇವರಿಗೆ  ಇಬ್ಬರು ಮಕ್ಕಳಿದ್ದಾರೆ. ಅನಂತರ ಆತ ಪತ್ನಿಯ ಚಿನ್ನದೊಡವೆಗಳನ್ನು ಪಡೆದು ದಿಢೀರ್ ಅಪ್ರತ್ಯಕ್ಷಗೊಂಡಿದ್ದನು. ಅನಂತರ ಕಾಸರಗೋಡಿನ ಇನ್ನೋರ್ವೆ ಯುವತಿಯನ್ನು ಇದೇ ರೀತಿ ಮದುವೆಯಾಗಿ ತಮಿಳುನಾಡಿಗೆ ತೆರಳಿ ಅಲ್ಲಿ  ಆಕೆಯ ಜೊತೆ ಕೆಲವು ಸಮಯ ವಾಸಿಸಿದ ಬಳಿಕ ಅಲ್ಲಿಂದಲೂ ಅಪ್ರತ್ಯಕ್ಷನಾಗಿದ್ದನು.  ಬಳಿಕ ಎರ್ನಾಕುಳಂಗೆ ಹೋಗಿ ಅಲ್ಲೂ ಓರ್ವೆ ಯುವತಿಯ ಜೊತೆ  ವಾಸಿಸತೊಡಗಿದ್ದನು. ಆ ವೇಳೆ ಆತ ಫೇಸ್ ಬುಕ್ ಮೂಲಕ ಆಲಪ್ಪುಳದ ಇನ್ನೋರ್ವೆ ಯುವತಿಯ ಪರಿಚಯಗೊಂಡು ಬಳಿಕ ಆಕೆಯನ್ನು ಮದುವೆಯಾದನು.

ಈ ಮಧ್ಯೆ ದೀಪುವಿನ ದ್ವಿತೀಯ ಪತ್ನಿ ಮತ್ತು ನಾಲ್ಕನೇ ಪತ್ನಿ ಫೇಸ್ ಬುಕ್ ಮೂಲಕ ಪರಸ್ಪರ ಪರಿಚಯಗೊಂಡು ತಮ್ಮ ಜೀವನದ ಕಷ್ಟಸುಖಗಳನ್ನು ಪರಸ್ಪರ ಹಂಚಿಕೊಳ್ಳತೊಡಗಿದಾಗಲೇ  ಅವರಿಬ್ಬರ ಪತಿ ಓರ್ವನೇ ಆಗಿರುವ ವಿಷಯ  ಅವರ ಗಮನಕ್ಕೆ ಬಂದಿದೆ. ಅದರಂತೆ ನಾಲ್ಕನೇ ಪತ್ನಿ ಆಲಪ್ಪುಳ ನಿವಾಸಿಯಾದ ಯುವತಿ  ಬಳಿಕ ನೀಡಿದ ದೂರಿನಂತೆ  ಕೋನ್ನಿ ಪೊಲೀಸರು ದೀಪು ವಿರುದ್ಧ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page