ಕಲ್ಲಿಕೋಟೆ: ಕ್ಷೇತ್ರ ಉತ್ಸವ ಸಂದರ್ಭದಲ್ಲಿ ಆನೆಗಳು ಮದವೇರಿ ಓಡಿದ ವೇಳೆ ಉಂಟಾದ ನೂಕುನುಗ್ಗಲು, ಕಾಲ್ತುಳಿತದಲ್ಲಿ ಸಿಲುಕಿ ಮೂವರು ಮೃತಪಟ್ಟ ಘಟನೆ ಕೊಯಿಲಾಂಡಿ ಸಮೀಪ ನಡೆದಿದೆ.
ಕುರುವಂಗಾಡ್ ಮಣಕುಳಂಙರ ಕ್ಷೇತ್ರದಲ್ಲಿ ನಿನ್ನೆ ಸಂಜೆ ೬ ಗಂಟೆಗೆ ಘಟನೆ ನಡೆದಿದೆ. ಕುರುಂವಗಾಡ್ ವಟ್ಟಾಕಂಡಿ ತಾಳ ಎಂಬಲ್ಲಿನ ಲೀಲ (68), ತಾಳತ್ತೇಡದ ಅಮ್ಮುಕುಟ್ಟಿ ಅಮ್ಮ (78), ವಡಕ್ಕಯಿಲ್ ರಾಜನ್ (68) ಎಂಬಿವರು ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ. 31 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕ್ಷೇತ್ರ ಉತ್ಸವ ವೇಳೆ ಪೀತಾಂಬರನ್ ಎಂಬ ಆನೆ ಮದವೇರಿ ಗೋಕುಲ್ ಎಂಬ ಆನೆಗೆ ತಿವಿದಿತ್ತು. ಅಲ್ಲದೆ ಕ್ಷೇತ್ರದ ಸುತ್ತು ಓಡಾಡಿ ಕಚೇರಿ, ಚಪ್ಪರ ಮೊದ ಲಾದವುಗಳನ್ನು ನಾಶಗೊಳಿಸಿದೆ.
ಕರುವಂಗಾಡ್ ಶಿವಕ್ಷೇತ್ರದಿಂದ ಮಣಕುಳಂಙರ ಕ್ಷೇತ್ರಕ್ಕೆ ಮೆರವ ಣಿಗೆಗೆ ಆನೆಗಳನ್ನು ಅಲಂಕರಿಸುತ್ತಿದ್ದಾಗ ಒಂದು ಆನೆಗೆ ಮದವೇರಿತ್ತು. ಕ್ಷೇತ್ರ ಬಳಿ ಪಟಾಕಿ ಸಿಡಿಸಿರುವುದೇ ಆನೆ ಮದವೇರಿ ದಾಳಿ ನಡೆಸಲು ಕಾರಣ ವೆಂದೂ ಹೇಳಲಾಗುತ್ತದೆ. ದೀರ್ಘ ಹೊತ್ತಿನ ಪ್ರಯತ್ನದ ಬಳಿಕ ಆನೆಗಳನ್ನು ನಿಯಂತ್ರಿಸಲು ಸಾಧ್ಯವಾಯಿತು. ದುರ್ಘಟನೆ ಹಿನ್ನೆಲೆಯಲ್ಲಿ ಉತ್ಸವ ನಿಲುಗಡೆಗೊಳಿಸಲಾಗಿದೆ.