ಕಾಕನಾಡ್ ಕಮಿಷನರ್ ಸಹಿತ ತಾಯಿ, ಸಹೋದರಿ ಆತ್ಮಹತ್ಯೆ ಪೊಲೀಸ್ ತನಿಖೆ ಆರಂಭ
ಕೊಚ್ಚಿ: ಕಾಕನಾಡ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕಸ್ಟಮ್ಸ್ ಅಡೀಶನಲ್ ಕಮಿಷನರ್ ಹಾಗೂ ಕುಟುಂಬ ಆತ್ಮಹತ್ಯೆಗೈದಿರುವುದಾಗಿ ಪ್ರಾಥಮಿಕವಾಗಿ ತಿಳಿದು ಬಂದಿದೆ. ಇದನ್ನು ಸ್ಪಷ್ಟಪಡಿಸುವ ಬರಹವೊಂದು ಕ್ವಾರ್ಟರ್ಸ್‌ನಿಂದ ಲಭಿಸಿದೆ. ಹಿಂದಿಯಲ್ಲಿ ಬರೆದ ಪತ್ರವಾಗಿದೆ ಇದು. ಇದರ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಕಸ್ಟಮ್ಸ್ ಅಡೀಶನಲ್ ಕಮಿಷನರ್ ಝಾರ್ಖಂಡ್ ನಿವಾಸಿಯಾದ ಮನೀಶ್ ವಿಜಯ್ (42), ಸಹೋದರಿ ಶಾಲಿನಿ (35), ತಾಯಿ ಶಕುಂತಳ (82) ಎಂಬಿವರನ್ನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಳೆದ ಕೆಲವು ದಿನಗಳಿಂದ ರಜೆಯಲ್ಲಿದ್ದ ಮನೀಶ್ ವಿಜಯ್ ರಜೆ ಮುಗಿದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಮೊಬೈಲ್‌ನಲ್ಲಿ ಸಂಪರ್ಕಿಸಲು ಯತ್ನಿಸಿದ್ದರು. ಆದರೆ ಫೋನ್ ಸ್ವಿಚ್ ಆಫ್ ಎಂದು ತಿಳಿದು ಬಂದಿತ್ತು. ಇದರಿಂದಾಗಿ ನಿನ್ನೆ ಸಂಜೆ ಸಹೋದ್ಯೋಗಿಗಳು ಕ್ವಾರ್ಟರ್ಸ್‌ಗೆ ತಲುಪಿ ಪರಿಶೀಲಿಸಿದಾಗ ಮನೀಶ್, ಶಾಲಿನಿಯ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದಾಗ ತಾಯಿ ಕೂಡಾ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಾಯಿಯ ಮೃತದೇಹ ಮಂಚದಲ್ಲಿ ಬೆಡ್‌ಶೀಟ್ ಮುಚ್ಚಿದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದು, ಇದರ ಸುತ್ತು ಹೂ ಚೆಲ್ಲಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಮೀಪದಲ್ಲೇ ಕುಟುಂಬದ ಭಾವಚಿತ್ರ ವೊಂದು ಲಭಿಸಿತ್ತು. ಮೂರು ಮಂದಿಯ ಮೃತ ದೇಹ ಕೂಡಾ ಕೊಳೆತ ಸ್ಥಿತಿಯಲ್ಲಿತ್ತು.