ನಿರಂತರ ವಿದ್ಯುತ್ ಮೊಟಕು: ನಾಗರಿಕರಿಂದ ಕುಂಬಳೆ ಕೆಎಸ್‌ಇಬಿ ಕಚೇರಿಯಲ್ಲಿ ಪ್ರತಿಭಟನೆ

ಕುಂಬಳೆ: ಸಂಜೆ ಬಳಿಕ ನಿರಂತರ ವಿದ್ಯುತ್ ಮೊಟಕುಗೊಳ್ಳುವುದರಿಂದ ಸಮಸ್ಯೆಗೀಡಾದ ನಾಗರಿಕರು ನಿನ್ನೆ ರಾತ್ರಿ ಕುಂಬಳೆ ಕೆಎಸ್‌ಇಬಿ ಕಚೇರಿಯಲ್ಲಿ ಮಿಂಚಿನ ಪ್ರತಿಭಟನೆ ನಡೆಸಿದರು.  ರಾತ್ರಿ ೧೦ ಗಂಟೆ ವೇಳೆ ಕೆಎಸ್‌ಇಬಿ ಕಚೇರಿಗೆ ತಲುಪಿದ ನಾಗರಿಕರು ಮೇಣದ ಬತ್ತಿ ಉರಿಸಿ ಪ್ರತಿಭಟನೆ ನಡೆಸಿದ್ದು, ಬಳಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಎರಡು ದಿನಗಳೊಳಗೆ ಸಮಸ್ಯೆಗೆ ಪರಿಹಾರ ಕಾಣಬೇಕೆಂದೂ ಇಲ್ಲದಿದ್ದಲ್ಲಿ ತೀವ್ರ ಚಳವಳಿ ನಡೆಸುವುದಾಗಿ ನಾಗರಿಕರು ಮುನ್ನೆಚ್ಚರಿಕೆ ನೀಡಿದರು. ಕಳೆದ ಕೆಲವು ದಿನಗಳಿಂದ ಕುಂಬಳೆ ಭಾಗದಲ್ಲಿ ಸಂಜೆ ೫ ಗಂಟೆ ವರೆಗೆ ಪದೇ ಪದೇ ವಿದ್ಯುತ್ ಮೊಟಕುಗೊಳ್ಳುವುದು ಸಮಸ್ಯೆಗೆ ಕಾರಣವಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ರಮ್ಜಾನ್ ವ್ರತಾಚರಣೆ ಸಂದರ್ಭದಲ್ಲಿ  ಈ  ರೀತಿಯಲ್ಲಿ ವಿದ್ಯುತ್ ನಿರಂತರ ಮೊಟಕುಗೊಳ್ಳುತ್ತಿ ರುವುದರಿಂದ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸಬೇಕಾಗಿ ಬರುತ್ತಿದೆ.

ಕುಂಬಳೆ, ಕಾಸರಗೋಡು ಭಾಗದಲ್ಲಿ ಈ ರೀತಿ ನಿರಂತರ ವಿದ್ಯುತ್ ಮೊಟಕುಗೊಳ್ಳುತ್ತಿರುವುದು ಮುಂದುವರಿದ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಾಣಬೇಕೆಂಬ ಬೇಡಿಕೆ  ತೀವ್ರಗೊಂಡಿದೆ.

ಶಾಸಕರಾದ ಎನ್.ಎ ನೆಲ್ಲಿಕುನ್ನು ಹಾಗೂ ಎಕೆಎಂ ಅಶ್ರಫ್ ನಿನ್ನೆ ವಿದ್ಯುತ್ ಖಾತೆ ಸಚಿವ ಕೃಷ್ಣನ್ ಕುಟ್ಟಿಯವರನ್ನು ಭೇಟಿಯಾಗಿ ವಿದ್ಯುತ್ ಸಮಸ್ಯೆಗೆ ಶೀಘ್ರ ಪರಿಹಾರ ಕಾಣಬೇಕೆಂದು ಮನವಿ ಸಲ್ಲಿಸಿದರು.

You cannot copy contents of this page