4.183 ಕೆ.ಜಿ ಗಾಂಜಾ ಪತ್ತೆ : ಸ್ಕೂಟರ್ ಸಹಿತ ಓರ್ವ ಸೆರೆ
ಕುಂಬಳೆ: ಕುಂಬಳೆ ಬಳಿ ಅಬಕಾರಿ ತಂಡ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 4.183 ಕಿಲೋ ಗ್ರಾಂ ಗಾಂಜಾ ಪತ್ತೆಹಚ್ಚಿದೆ.
ಇದಕ್ಕೆ ಸಂಬಂಧಿಸಿ ಕುಂಬಳೆಗೆ ಸಮೀಪದ ಬಂಬ್ರಾಣದ ಎಂ. ಸುನಿಲ್ ಕುಮಾರ್ ಎಂ. (35) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲ ಮಾಲು ಸಾಗಿಸಲು ಬಳಸಲಾದ ಸ್ಕೂಟರನ್ನೂ ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಕೊಪಾಡಿ ಮಾವಿನಕಟ್ಟೆಯಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ಯವರ ನೇತೃತ್ವದ ಅಬಕಾರಿ ತಂಡ ನಿನ್ನೆ ರಾತ್ರಿ 10.30ರ ವೇಳೆಗೆ ಈ ಕಾರ್ಯಾಚರಣೆ ನಡೆಸಿದೆ. ಆ ವೇಳೆ ಆರೋಪಿ ಸ್ಕೂಟರ್‌ನಲ್ಲಿ ಆ ದಾರಿಯಾಗಿ ಬಂದಾಗ ಅಬಕಾರಿ ತಂಡ ಆತನನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಗಾಂಜಾ ಪತ್ತೆಯಾಗಿದೆ. ನಂತರ ಆರೋಪಿಯ ಸಹಿತ ಮಾಲನ್ನು ಕಾಸರಗೋಡು ಎಕ್ಸೈಸ್ ಸ್ಕ್ವಾಡ್ ಕಚೇರಿಗೆ ತಂದು ಆತನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಕೇಸು ದಾಖಲಿಸಲಾಗಿದೆ. ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್, ಪ್ರಿವೆಂಟಿವ್ ಆಫೀಸರ್‌ಗಳಾದ ಪ್ರಶಾಂತ್ ಕುಮಾರ್, ಅಜೀಶ್ ಸಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅತುಲ್ ಟಿ.ವಿ, ಸತೀಶನ್ ಕೆ, ಸಜ್ನಾ ಮತ್ತು ಚಾಲಕ ಸಜೇಶ್ ಎಂಬವರು ಒಳಗೊಂಡಿದ್ದರು.