ಕಂಚಿಕಟ್ಟೆ ಸೇತುವೆ ತೆರೆದುಕೊಡಲು ಮಾನವಹಕ್ಕು ಆಯೋಗಕ್ಕೆ ಸಮಾಜಸೇವಕ ಮನವಿ

ಕುಂಬಳೆ: ಕುಂಬಳೆ ಹೊಳೆಗೆ ಅಡ್ಡವಾಗಿ ನಿರ್ಮಿಸಿರುವ ಕಂಚಿಕಟ್ಟೆ ಸೇತವೆಯನ್ನು ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಸಾಗುವ ರೀತಿಯಲ್ಲಿ ತೆರೆದುಕೊಡಬೇಕೆಂದು ಸಮಾಜಸೇವಕ ಐ ಮೊಹಮ್ಮದ್ ರಫೀಕ್ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ಸೇತುವೆಯ  ಶೋಚನೀಯ ಸ್ಥಿತಿಯನ್ನು ಮನಗಂಡು 2024 ಮಾರ್ಚ್‌ನಲ್ಲಿ ಈ ಸೇತುವೆ ಮೂಲಕದ ಸಂಚಾರವನ್ನು ನಿಷೇಧಿಸಲಾಗಿತ್ತು. ಇದರಿಂದಾಗಿ ಈ ಪ್ರದೇಶದ ಜನರ ಸಂಚಾರ ಸಮಸ್ಯೆ ತೀವ್ರಗೊಂಡಿತು.

ಕಂಚಿಕಟ್ಟೆ, ಕುಂಡಾಪು, ಕೆಳಗಿನ ಆರಿಕ್ಕಾಡಿ, ಕೆಳಗಿನ ಕೊಡ್ಯಮ್ಮೆ, ಛತ್ರಂಪಳ್ಳ, ಚೂರಿತ್ತಡ್ಕ ಮೊದಲಾದ ಪ್ರದೇಶಗಳ ನೂರಾರು ಮಂದಿ ಕೃಷಿಕರು, ಕಾರ್ಮಿಕರು, ವ್ಯಾಪಾರಿಗಳು, ವಿದ್ಯಾ ರ್ಥಿಗಳು ಸಂಚರಿಸಲು ಸಂಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಹೊಸ ಸೇತುವೆ ನಿರ್ಮಿಸಲು ಡಿಸೈನ್, ಡಿಪಿಆರ್ ಎಂಬಿವು ಸಿದ್ಧವಾಗಿದೆ. ಆದರೆ ಅದಕ್ಕಿರುವ ಮೊತ್ತ ಸರಕಾರ ಮಂಜೂರುಗೊಳಿಸಿಲ್ಲ. ನಬಾರ್ಡ್‌ನ ಐಆರ್‌ಡಿಎಫ್‌ನಲ್ಲಿ ಒಳಗೊಳ್ಳಿಸಿ ಕಾಮಗಾರಿ ನಡೆಸಲಾಗುವುದೆಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೆ ಅದಕ್ಕಿರುವ ಯಾವುದೇ ಪ್ರಾರಂಭ ಚಟುವಟಿಕೆಗಳು ಕೂಡಾ ನಡೆದಿಲ್ಲ. ಈ ವರ್ಷದ ನಬಾರ್ಡ್ ಯೋಜನೆಯಲ್ಲಿ ಸೇರಿಸಿದರೆ ಮಾತ್ರವೇ ಸೇತುವೆಯ ಕೆಲಸ ವೇಗದಲ್ಲಿ ಸಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮಾನವಹಕ್ಕು ಆಯೋಗ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಮುಚ್ಚಿದ ಸೇತುವೆಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಸಂಚರಿಸುವುದಕ್ಕೆ ಅನುಮತಿ ನೀಡುವುದು ಹಾಗೂ ಹೊಸ ರೆಗ್ಯುಲೇಟರ್ ಕಂ ಬ್ರಿಡ್ಜ್ ಈ ವರ್ಷದ ನಬಾರ್ಡ್ ಯೋಜನೆಯಲ್ಲಿ ತುರ್ತು ಆಧಾರದಲ್ಲಿ ಸೇರಿಸಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ರಫೀಕ್ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

RELATED NEWS

You cannot copy contents of this page