ಕಾಲೇಜು ಹಾಸ್ಟೆಲ್‌ನಲ್ಲಿ 2 ಕಿಲೋ ಗಾಂಜಾ ಪತ್ತೆ: 3 ವಿದ್ಯಾರ್ಥಿಗಳ ಸೆರೆ
ಕೊಚ್ಚಿ: ಕಳಮಶ್ಶೇರಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಗಂಡು ಮಕ್ಕಳ ಹಾಸ್ಟೆಲ್‌ನಿಂದ ಎರಡು ಕಿಲೋ ಗಾಂಜಾ ವಶಪಡಿಸಲಾಗಿದೆ. ನಿನ್ನೆ ರಾತ್ರಿ ಪೊಲೀಸರು ನಡೆಸಿದ ದಾಳಿಯಲ್ಲಿ ಗಾಂಜಾ ಪತ್ತೆಹಚ್ಚಲಾಗಿದೆ. ಮೂರು ವಿದ್ಯಾರ್ಥಿಗಳು ಈ ಪ್ರಕರಣದಲ್ಲಿ ಸೆರೆಯಾಗಿದ್ದಾರೆ. ಜೊತೆಗಿದ್ದವರು ಪರಾರಿಯಾದರು. ಹರಿಪ್ಪಾಡ್ ನಿವಾಸಿ ಆದಿತ್ಯನ್, ಕರುನಾಗಪಳ್ಳಿ ನಿವಾಸಿ ಅಭಿರಾಜ್ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಇನ್ನೋರ್ವ ವಿದ್ಯಾರ್ಥಿ ಆಕಾಶ್‌ನ ಕೊಠಡಿಯಿಂದ 1.9 ಕಿಲೋ ಗಾಂಜಾ ವಶಪಡಿಸಲಾಗಿದೆ. ವಿದ್ಯಾರ್ಥಿಗಳಿಂದ ಎರಡು ಮೊಬೈಲ್ ಫೋನ್ ಹಾಗೂ ಗುರುತು ಚೀಟಿಗಳನ್ನು ವಶಪಡಿಸಲಾಗಿದೆ.
ಕಾಲೇಜ್ ಹಾಸ್ಟೆಲ್‌ನಲ್ಲಿ ಇದೇ ಪ್ರಥಮವಾಗಿ ಗಾಂಜಾ ಸಂಗ್ರಹ ವಶಪಡಿಸಲಾಗಿದ್ದು, ಇಡೀ ರಾಜ್ಯವನ್ನೇ ಈ ಘಟನೆ ನಡುಗಿಸಿದೆ. ಪರಾರಿಯಾದ ಮೂವರು ವಿದ್ಯಾರ್ಥಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಪೊಲೀಸರ ತಂಡ ಹಾಸ್ಟೆಲ್‌ಗೆ ತಲುಪುವಾಗ ವಿದ್ಯಾರ್ಥಿಗಳು ಗಾಂಜಾವನ್ನು ತೂಕ ಮಾಡಿ ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಾಗಿ ಸಿದ್ಧಪಡಿಸುತ್ತಿದ್ದರೆಂದು ದಾಳಿಗೆ ನೇತೃತ್ವ ನೀಡಿದ ಕೊಚ್ಚಿ ನಾರ್ಕೋಟಿಕ್ ಸೆಲ್ ಎಸಿಪಿ ಅಬ್ದುಲ್ ಸಲಾಂ ತಿಳಿಸಿದರು. ತಕ್ಕಡಿಯನ್ನು ಕೂಡಾ ಪೊಲೀಸರು ವಶಪಡಿಸಿದ್ದಾರೆ.