ಸಂಚರಿಸುತ್ತಿದ್ದ ಕಾರಿನ ಮೇಲೆ ವಿದ್ಯುತ್ ತಂತಿ ಸಹಿತ ಮುರಿದು ಬಿದ್ದ ಮರ: ತಪ್ಪಿದ ಭಾರೀ ಅನಾಹುತ

ಕಾಸರಗೋಡು: ಸಂಚರಿಸುತ್ತಿದ್ದ ಕಾರಿನ ಮೇಲೆ ವಿದ್ಯುತ್ ತಂತಿ ಸಹಿತ ಮರ ಬಿದ್ದು ಸಂಭಾವ್ಯ ಭಾರೀ ದೊಡ್ಡ ದುರಂತ ಅದೃಷ್ಟವಶಾತ್ ತಪ್ಪಿಹೋದ ಘಟನೆ ವಿದ್ಯಾನಗರದಲ್ಲಿ ನಿನ್ನೆ ನಡೆದಿದೆ. ವಿದ್ಯಾನಗರದಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿಯ ಆವರಣದೊಳಗಿನ ಮರದ ರಂಬೆ ಸಮೀಪದ ರಸ್ತೆ ಬಳಿಯಿರುವ ಎಚ್.ಟಿ. ವಿದ್ಯುತ್ ಲೈನ್‌ನ ಮೇಲೆ ಮುರಿದು ಬಿದ್ದು, ಎರಡು ವಿದ್ಯುತ್ ಕಂಬಿಗಳು ಕುಸಿದು ಬಿದ್ದಿವೆ. ಆ ವೇಳೆ ರಸ್ತೆ ಮೂಲಕ ಬರುತ್ತಿದ್ದ ಕಾರಿನ ಮೇಲೆ ಮರದ ರೆಂಬೆ ಹಾಗೂ ವಿದ್ಯುತ್ ಲೈನ್‌ಗಳು ಬಿದ್ದಿವೆ.

ಆ ಕಾರಿನೊಳಗಿದ್ದ ವಿದ್ಯಾನಗರ ನಿವಾಸಿ  ಪವಿತ್ರನ್ ಎಂಬವರು ಅದರೊಳಗೇ  ಸಿಲುಕಿಕೊಂಡರು. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕ ದಳ  ಅಲ್ಲಿಗೆ ಆಗಮಿಸಿ ವಿದ್ಯುತ್ ಕಚೇರಿಯ ಸಿಬ್ಬಂದಿಗಳ ಸಹಾಯದಿಂದ ವಿದ್ಯುತ್ ಸಂಪರ್ಕ ಪೂರೈಕೆ ನಿಲುಗಡೆಗೊಳಿಸಿ ದರು. ನಂತರ ಅಗ್ನಿಶಾಮಕದಳ ಮರಗಳನ್ನು  ಮುರಿದು, ಆ ಕಾರಿನಲ್ಲಿ ಸಿಲುಕಿಕೊಂಡಿದ್ದ ಪವಿತ್ರನ್‌ರನ್ನು ಹೊರ ತೆಗೆದು ರಕ್ಷಿಸಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆ ಗಂಟೆಗಳ ತನಕ ಮುಂದುವರಿಯಿತು. ಅಷ್ಟರ ತನಕ ಈ ರಸ್ತೆಯ ಸಾರಿಗೆ ಸಂಚಾರವೂ ಮೊಟಕುಗೊಂಡಿತು.

ಕಾಸರಗೋಡು ಅಗ್ನಿಶಾಮಕದಳದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್‌ರ ನೇತೃತ್ವದಲ್ಲಿ ಇತರ ಸಿಬ್ಬಂದಿಗಳಾದ ಒ.ಕೆ. ಪ್ರಜಿತ್, ಕೆ. ಸತೀಶ್, ಮೊಹಮ್ಮದ್ ಸಿರಾಜ್ ಮತ್ತು ಸೋಬಿನ್ ಎಂಬಿವರನ್ನೊಳಗೊಂಡ ತಂಡ ಈ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಇದೇ ರೀತಿ ಅಣಂಗೂರು ಬೆದಿರಾ ತಾನಿಯತ್‌ನ ಅಡಿಕೆ ತೋಟಕ್ಕೆ ಹೋಗುವ ರಸ್ತೆಯಲ್ಲಿ ಆಟೋರಿಕ್ಷಾವೊಂದರ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಆದರೆ ಆ ವೇಳೆ ಆ ಲೈನ್‌ನ ವಿದ್ಯುತ್ ಸರಬರಾಜು ಮೊಟಕುಗೊಂಡಿದ್ದ ಹಿನ್ನೆಲೆಯಲ್ಲಿ  ಸಂಭಾವ್ಯ ಅನಾಹುತ ತಪ್ಪಿ ಹೋಗಿದೆ.

RELATED NEWS

You cannot copy contents of this page