ಬೆಂಗಳೂರು: ಕರ್ನಾಟಕದಲ್ಲಿ ನಮ್ಮ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಬೆಂಬಲ ಲಭಿಸಿ ರುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಜೆಡಿಎಸ್‌ನ ಕೇರಳ ಘಟಕವೂ ಈ ಮೈತ್ರಿಗೆ ಬೆಂಬಲ ನೀಡಿದೆ ಎಂದೂ ಗೌಡ ಹೇಳಿದ್ದಾರೆ. ಬಿಜೆಪಿ ಯೊಂದಿಗೆ ಮಾಡಿಕೊಂಡ ಮೈತ್ರಿ ಯನ್ನು ವಿರೋಧಿಸಿ ರಂಗಕ್ಕಿಳಿದ ಜೆಡಿಎಸ್‌ನ ಕರ್ನಾಟಕ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂರನ್ನು ಪಕ್ಷದಿಂದ ವಜಾಗೈಯ್ಯುವ ವಿಷಯದ ಬಗ್ಗೆ ಬೆಂಗಳೂರಿನಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಗೌಡರು ಈ ವಿಷಯ ತಿಳಿಸಿದ್ದಾರೆ.
ಜೆಡಿಎಸ್‌ನ ಕೇರಳ ಘಟಕ ಎಡರಂಗದ ಜತೆಗಿದೆ. ನಮ್ಮ ಪಕ್ಷದ ಓರ್ವ ಶಾಸಕ ಕೇರಳದಲ್ಲಿ ಸಚಿವರೂ ಗಿ ಈಗ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾ ಟಕದಲ್ಲಿ ಜೆಡಿಎಸ್ ಯಾಕೆ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂಬುವುದರ ಕಾರಣವನ್ನೂ ಅವರು ಮನಗಂಡಿದ್ದಾರೆ. ಕೇರಳದ ಸಚಿವ ಸಂಪುಟದಲ್ಲಿರುವ ನಮ್ಮ ಪಕ್ಷದ ಸಚಿವ (ಕೆ. ಕೃಷ್ಣನ್ ಕುಟ್ಟಿ)ಯವರೂ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ನ್ನು ರಕ್ಷಿಸಲು ಕರ್ನಾಟಕದಲ್ಲಿ ಬಿಜೆಪಿಯೊಂ ದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಕೇರಳ ಮುಖ್ಯಮಂತ್ರಿಗೆ ನಾವು ತಿಳಿಸಿದ್ದೇವೆ. ಅದಕ್ಕೆ ಅವರು ಸಮ್ಮತಿ ಯನ್ನೂ ಸೂಚಿಸಿದ್ದಾರೆಂದು ಗೌಡರು ತಿಳಿಸಿದ್ದಾರೆ. ಬಿಜೆಪಿಯೊಂದಿಗೆ ತಮ್ಮ ಪಕ್ಷ ಮಾಡಿಕೊಂಡ ಮೈತ್ರಿಯನ್ನು ನಮ್ಮ ಪಕ್ಷದ ತಮಿಳುನಾಡು ಮತ್ತು ಮಹಾ ರಾಷ್ಟ್ರ ಘಟಕಗಳೂ ಅಂಗೀಕರಿಸಿವೆ. ಆದರೆ ಈ ವಿಷಯದಲ್ಲಿ ಪಕ್ಷದ ಕೇರಳ ಘಟಕ ಮಾತ್ರ ಭಿನ್ನ ನಿಲುವು ವ್ಯಕ್ತಪಡಿಸಿದೆ. ಕೇರಳದಲ್ಲಿ ಎಡರಂಗದ ಜತೆ ಮುಂದುವರಿಯಲು ಹಾಗೂ ಬಿಜೆಪಿ ಮೈತ್ರಿಯನ್ನು ತೊರೆಯುವ ತೀರ್ಮಾನವನ್ನು ಜೆಡಿಎಸ್‌ನ ಕೇರಳ ಘಟಕ ಕೈಗೊಂಡಿದೆ. ಆ ವಿಷಯವನ್ನು ಕೇರಳ ಘಟಕದ ನೇತಾರರು ನನ್ನನ್ನು ಕಂಡು ನೇರವಾಗಿ ತಿಳಿಸಿದ್ದಾರೆಂದು ಗೌಡರು ಹೇಳಿದ್ದಾರೆ.
ಕೇರಳ ಘಟಕಕ್ಕೆ ಸ್ವತಂತ್ರ ನಿಲುವು ಕೈಗೊಳ್ಳುವ ಅಧಿಕಾರವಿದೆ ಎಂದು ನಾವು ದೇವೇಗೌಡರಿಗೆ ನೇರವಾಗಿ ತಿಳಿಸಿರುವುದಾಗಿ ಕೇರಳ ಘಟಕದ ಅಧ್ಯಕ್ಷ ಮ್ಯಾಥ್ಯು ಟಿ. ಥೋಮಸ್ ಇನ್ನೊಂದೆಡೆ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಜೆಡಿಎಸ್‌ನ ಕೇಂದ್ರ ಮತ್ತು ಕೇರಳ ಘಟಕದ ನಡುವಿನ ಭಿನ್ನಮತ ಈ ವಿಷಯ ಪರಿಹಾರಗೊಳ್ಳದೆ ಇನ್ನೂ ಮುಂದುವರಿಯುವಂತೆ ಮಾಡಿದೆ.
ಜೆಡಿಎಸ್ ಬಿಜೆಪಿಯೊಂದಿಗೆ ಮಾಡಿಕೊಂಡಿರುವ ಮೈತ್ರಿಯನ್ನು ಎಡರಂಗದ ವಿರುದ್ಧ ಅಸ್ತ್ರವನ್ನಾಗಿ ಇನ್ನೊಂದೆಡೆ ಕಾಂಗ್ರೆಸ್ ಕೂಡಾ ಬಳಸತೊಡಗಿದೆ.