ಪ್ರೇಮ ವಿನಂತಿ ತಿರಸ್ಕರಿಸಿದ ಕೇರಳೀಯ ಯುವತಿಯ ಕೊಲೆಗೈದ ಯುವಕ ಠಾಣೆಗೆ ಶರಣು

ಕೊಯಂಬತ್ತೂರು: ಪ್ರೇಮ ವಿನಂತಿಯನ್ನು ತಿರಸ್ಕರಿಸಿದ ಕೇರಳೀಯ ವಿದ್ಯಾರ್ಥಿನಿಯನ್ನು ಮನೆಯೊಳಗೆ ನುಗ್ಗಿ ಯುವಕ ಇರಿದು ಕೊಲೆಗೈದ ಘಟನೆ ನಡೆದಿದೆ. ಕೊಲೆಯ ಬಳಿಕ ಪೊಲೀಸರಿಗೆ ಶರಣಾದ ಯುವಕನನ್ನು ಬಂಧಿಸಲಾಗಿದೆ. ಪೊಳ್ಳಾಚಿ ವಡುಗಪಾಳಯದಲ್ಲಿ ಈ ಘಟನೆ ನಡೆದಿದೆ.

ಪೊನ್ಮುತ್ತು ನಗರದ ಕೇರಳೀಯ ಕುಟುಂಬದ ಕಣ್ಣನ್‌ರ ಪುತ್ರಿ ಅಶ್ವಿಕ (19)ಳನ್ನು ಕೊಲೆಗೈಯ್ಯ ಲಾಗಿದೆ. ಉದುಮಲ್ ಪೇಟ ರಸ್ತೆ ಅಣ್ಣಾನಗರ್ ನಿವಾಸಿ ಹಾಗೂ  ಖಾಸಗಿ ಹಣಕಾಸು ವ್ಯವಹಾರ ಸಂಸ್ಥೆಯ ನೌಕರನಾದ ಪ್ರವೀಣ್ ಕುಮಾರ್ ಸೆರೆಯಾದ ಯುವಕ. ಕೊಯಂಬತ್ತೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್‌ಸಿ ಕಂಪ್ಯೂಟರ್ ಸಯನ್ಸ್ ವಿದ್ಯಾರ್ಥಿನಿಯಾಗಿದ್ದಾಳೆ ಅಶ್ವಿಕ. ಹೆತ್ತವರು ಕೆಲಸಕ್ಕೆ ತೆರಳಿದ ಸಮಯದಲ್ಲಿ ಈಕೆ ಮನೆಯಲ್ಲಿ ಒಂಟಿಯಾಗಿರುವುದನ್ನು ತಿಳಿದುಕೊಂಡಿದ್ದ ಪ್ರವೀಣ್ ಕುಮಾರ್ ಮನೆಗೆ ನುಗ್ಗಿ ದಾರುಣವಾಗಿ ಇರಿದಿದ್ದಾನೆ. ಕುತ್ತಿಗೆ ಹಾಗೂ ಎದೆಗೆ ಗಂಭೀರ ಗಾಯಗೊಂಡ ಯುವತಿಯ ಬೊಬ್ಬೆ ಕೇಳಿ ಸ್ಥಳಕ್ಕೆ ತಲುಪಿದ ನೆರೆಮನೆಯವರು ಈಕೆಯನ್ನು ಆಸ್ಪತ್ರೆಗೆ ತಲುಪಿಸಿದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಘಟನೆ ಸ್ಥಳದಿಂದ ತೆರಳಿದ ಬಳಿಕ ಪ್ರವೀಣ್ ಕುಮಾರ್ ನೇರ ವೆಸ್ಟ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಐದು ವರ್ಷ ಕಾಲ ಪ್ರವೀಣ್ ಹಾಗೂ ಕುಟುಂಬ ಯುವತಿಯ ಮನೆ ಬಳಿಯಲ್ಲೇ ವಾಸವಾಗಿತ್ತು. ಈ ಸಂದರ್ಭದಲ್ಲಿ ಯುವತಿಯೊಂದಿಗೆ ಪರಿಚಯಗೊಂಡು ಅದು ಪ್ರೇಮಕ್ಕೆ ತಿರುಗಿತ್ತು. ಬಳಿಕ ಅಣ್ಣನಗರ್‌ಗೆ ವಾಸ ಬದಲಾಯಿಸಿದ ಪ್ರವೀಣ್ ಕುಮಾರ್ ಯುವತಿಗೆ ಆಗಾಗ ಫೋನ್ ಕರೆ ಮಾಡಿ ಉಪಟಳ ನೀಡುತ್ತಿದ್ದನೆನ್ನಲಾಗಿದೆ. ಆದರೆ ಈತನ ಪ್ರೇಮ ವಿನಂತಿಯನ್ನು ಆಕೆ ನಿರಾಕರಿಸಿರುವುದು ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page