ಇಸ್ರೋದ ಮಾನವರಹಿತ ಗಗನಯಾನ ನೌಕೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಹೈದರಾಬಾದ್: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ಧವನ್ ಬಾಹ್ಯಾಕಾಶ ಕೇಂದ್ರದಿಂದ, ಇಸ್ರೋದ ಮಾನವರಹಿತ ಗಗನಯಾನ ಯೋ ಜನೆಯ ಪರೀಕ್ಷಾ ಪ್ರಯೋಗ ಅತ್ಯಂತ ಯಶಸ್ವಿಗೊಂಡಿದೆ.
ಇಸ್ರೋ ಮುಖ್ಯಸ್ಥ ಸೋಮನಾಥ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಟೆಸ್ಟ್ ವೆಹಿಕಿಲ್ ಲಿಫ್ಟ್ ಅಪ್ ಯಶಸ್ವಿ ಯಾಗಿದ್ದು, ವಾಹನ ಸುರಕ್ಷಿತವಾಗಿದೆ. ಮಾತ್ರವಲ್ಲ ನಿರೀಕ್ಷಿತ ರೀತಿಯಲ್ಲೇ ಇದರ ಉಡಾವಣೆ ಯಶಸ್ವಿಗೊಂಡಿದೆ ಎಂದಿದ್ದಾರೆ. ಇಂದು ಬೆಳಿಗ್ಗೆ ೧೦ ಗಂಟೆಗೆ ಮಾನವರಹಿತ ಗಗನ ಯೋಜನೆಯ ನೌಕೆ ಪ್ರಯೋಗ ನಡೆಸಿದ್ದು, ರಾಕೆಟ್ ನಿಂದ ೨ ಮೋಡ್ಯೂಲ್‌ಗಳು ಪ್ರತ್ಯೇಕ ಗೊಂಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ತನ್ನ ಮಹತ್ವಾಕಾಂಕ್ಷೆಯ ಗಗನಯಾನ್ ಮಿಷನ್‌ಗಾಗಿ ಇಂದು ಬೆಳಿಗ್ಗೆ ೮.೩೦ಕ್ಕೆ ಮೊದಲ ಪರೀಕ್ಷಾ ಹಾರಾಟ ನಡೆಸಲು ಸಿದ್ಧವಾಗಿತ್ತು. ಆದರೆ, ಉಡಾವಣೆಗೆ ಇನ್ನೇನು ಐದು ನಿಮಿಷ ಬಾಕಿ ಉಳಿದಿರುವಂತೆಯೇ ಬಾಹ್ಯಾಕಾಶ ಸಂಸ್ಥೆ ಪ್ರಕಾರ ಮೊದಲ ಫ್ರೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-೧(ಟಿವಿ-ಡಿ-೧) ಕ್ರ್ಯೂ ಎಸ್ಕೇಪ್ ಸಿಸ್ಟಂ (ಸಿಇಎಸ್) ಸ್ವಲ್ಪ ತಾಂತ್ರಿಕ ದೋಷ ದಿಂದ ಸ್ಥಗಿತಗೊಳಿಸಲಾಗಿತ್ತು. ಅದನ್ನು ಸರಿಪಡಿಸಿದ ಬಳಿಕ ೧೦ ಗಂಟೆಗೆ ಯಶಸ್ವಿ ಯಾಗಿ ಉಡಾವಣೆ ನಡೆಸಲಾಯಿತು. ಕೇವಲ ೯ ನಿಮಿಷ ೫೧ ಸೆಕೆಂಡುಗಳಲ್ಲಿ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ತೀಕರಿಸಲಾಯಿತು. ಭಾರತೀಯ ನೌಕಾಪಡೆ ಮತ್ತು ಸೇನಾ ಪಡೆಯು ಅಗತ್ಯದ ಭದ್ರತೆಯನ್ನು ಇದಕ್ಕೆ ಏರ್ಪಡಿಸಿತ್ತು. ಗಗನಯಾನ ಮಿಷನ್‌ನ ಪ್ರಾಥಮಿಕ ಗುರಿ ಮಾನವರನ್ನು ಬಾಹ್ಯಾಕಾಶಕ್ಕೆ ಉಡಾಯಿಸುವುದು, ಕೆಲವು ದಿನಗಳ ಕಾರ್ಯಾಚರಣೆಗಾಗಿ ಅವರನ್ನು ೪೦೦ ಕಿಲೋ ಮೀಟರ್ ಎತ್ತರದಲ್ಲಿರುವ ಭೂಮಿಯ ಕೆಳಕಕ್ಷೆಯಲ್ಲಿ ಇರಿಸುವುದು, ೨೦೨೫ರಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿಸುವುದು ಈ ಮಿಷನ್‌ನ ಪ್ರಧಾನ ಉದ್ದೇಶವಾಗಿದೆ. ಅದಕ್ಕೆ ಪೂರ್ವಭಾವಿ ತಯಾರಿ ಎಂಬಂತೆ ಇಂದು ಬೆಳಿಗ್ಗೆ ಮಾನವರಹಿತ ಗಗನಯಾನ ನೌಕೆಯ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು.