ಸೋರುತ್ತಿರುವ ಮನೆಯಲ್ಲಿ ಬಡ ಕುಟುಂಬದ ವಾಸ: 13 ವರ್ಷಗಳಿಂದ ಮನೆಗಾಗಿ ಪಂ.ಗೆ ಅರ್ಜಿ ಸಲ್ಲಿಸುತ್ತಿದ್ದರೂ ಲಭಿಸದ ಸೌಲಭ್ಯ

ಪುತ್ತಿಗೆ: ಬಡ ಕುಟುಂಬವೊಂದು ಹೊಸ ಮನೆಗಾಗಿ ಹಲವು ವರ್ಷಗಳಿಂದ ಪಂಚಾಯತ್‌ಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದು, ಆದರೆ ಇದುವರೆಗೆ ಅವರ ಅರ್ಜಿ ಮೇಲೆ ಯಾವುದೇ ಕ್ರಮ ಉಂಟಾಗಿಲ್ಲ. ಇದರ ಪರಿಣಾಮ ಕುಟುಂಬ ಇದೀಗಲೂ ಟರ್ಪಾಲು ಹಾಸಿದ ಮನೆಯಲ್ಲಿ ವಾಸಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ಪುತ್ತಿಗೆ ಪಂಚಾಯತ್ ಮೂರನೇ ವಾರ್ಡ್ ವ್ಯಾಪ್ತಿಯ ಕೆಳಗಿನ ಮಣಿಯಂಪಾರೆಯಲ್ಲಿ ವಾಸಿಸುವ ಮೂಸಾ- ರುಖಿಯಾ ಕುಟುಂಬದ ದಯನೀಯ ಸ್ಥಿತಿ ಇದಾಗಿದೆ.

ಓರ್ವ ಪುತ್ರ ಸಹಿತ ಈ ಕುಟುಂಬ ಸೋರುತ್ತಿರುವ ಈ ಮನೆಯಲ್ಲಿ ವಾಸಿಸುತ್ತಿದೆ. ಮನೆ ಛಾವಣಿಗೆ ಟರ್ಪಾಲು ಹಾಸಿದ್ದು, ಆದರೆ ಮಳೆ ನೀರು ಒಳಗೆ ಸೋರಿಕೆಯಾಗುತ್ತಿರುವುದರಿಂದ ಅದರ ಮೇಲೆ ಟರ್ಪಾಲು ಹೊದಿಸಲಾಗಿದೆ. ಆದರೆ ಗಾಳಿ, ಮಳೆಗೆ ಇದರಲ್ಲಿ ವಾಸಿಸುವುದು ಆತಂಕ ಮೂಡಿಸುತ್ತಿದೆ ಎಂದು ಕುಟುಂಬ ತಿಳಿಸುತ್ತಿದೆ. ಮೂಸ ಕೂಲಿ ಕೆಲಸ ನಿರ್ವಹಿಸಿ ಕುಟುಂಬವನ್ನು ಸಾಕುತ್ತಿದ್ದಾರೆ. ಹಾಗಿರುವಾಗ ಹೊಸ ನಿರ್ಮಾಣಕ್ಕೆ ಸಾಧ್ಯವಾಗದ ಸ್ಥಿತಿ ಇವರದ್ದಾಗಿದೆ. ಆದ್ದರಿಂದ ಸರಕಾರದಿಂದ ಹೊಸ ಮನೆಗಾಗಿ ಇವರು ಕಳೆದ 13 ವರ್ಷಗಳಿಂದ ಪಂಚಾಯತ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಪಂಚಾಯತ್‌ನಿಂದ ಮನೆ ಮಂಜೂರಾಗಿಲ್ಲ. ಅಲ್ಲದೆ ಪಂಚಾಯತ್‌ನ್ನು ಭೇಟಿಯಾಗಿ ವಿಚಾರಿಸಿದಾಗ ಮುಂದಿನ ವರ್ಷ ಮನೆ ಮಂಜೂರು ಮಾಡುವುದಾಗಿ ತಿಳಿಸುತ್ತಿದ್ದಾರೆನ್ನಲಾಗಿದೆ. ಪ್ರತೀ ವರ್ಷವೂ ಅಧಿಕಾರಿಗಳು ಇದನ್ನು ತಿಳಿಸುತ್ತಿದ್ದಾರೆಂದೂ ದೂರಲಾಗಿದೆ.

ಶೋಚನೀಯ ಮನೆಯಲ್ಲಿ ವಾಸಿಸುತ್ತಿರುವುದರಿಂದ ವಿದ್ಯಾರ್ಥಿಯಾದ ಪುತ್ರನ ಕಲಿಕೆಗೂ ತೊಂದರೆ ಸೃಷ್ಟಿಯಾಗಿದೆ ಎಂದೂ ಕುಟುಂಬ ದೂರುತ್ತಿದೆ. ಬಡವರಿಗೆ ಮನೆ ನೀಡುವುದಾಗಿ ಸರಕಾರ ತಿಳಿಸುತ್ತಿರುವಾಗ ವಾಸಯೋಗ್ಯ ವಲ್ಲದ ಬಡ ಕುಟುಂಬಕ್ಕೆ ಮನೆ ಮಂಜೂರು ಮಾಡದಿರಲು ಕಾರಣವೇನೆಂದೂ ಕುಟುಂಬ ಪ್ರಶ್ನಿಸುತ್ತಿದೆ. ಇದೇ ವೇಳೆ ಈ ಬಡ ಕುಟುಂಬಕ್ಕೆ ಶೀಘ್ರವೇ ಮನೆ ಮಂಜೂರು ಮಾಡಬೇಕೆಂದು ಸ್ಥಳೀಯ ಸ್ವ-ಸಹಾಯ ಸಂಘದ ಸದಸ್ಯರು ಪಂಚಾಯತ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page