ಶಮನಗೊಳ್ಳದ ಜಡಿಮಳೆ: ಮುಂದುವರಿದ ಪ್ರಾಕೃತಿಕ ದುರಂತ ಕಾಸರಗೋಡಿನಲ್ಲಿ ಇಬ್ಬರು ಮಕ್ಕಳು, ಓರ್ವೆ ಮಹಿಳೆ ಸೇರಿ ಮೂವರು ಸಾವು
ಕಾಸರಗೋಡು: ರಾಜ್ಯದಾದ್ಯಂ ತವಾಗಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಜಡಿಮಳೆ ಇನ್ನೊಂದೆಡೆ ಭಾರೀ ಪ್ರಾಕೃತಿಕ ದುರಂತಗಳಿಗೂ ಕಾರಣವಾಗಿದೆ.
ಪ್ರಾಕೃತಿಕ ದುರಂತದಿಂದ ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ ಮಾತ್ರ ಇಬ್ಬರು ಮಕ್ಕಳು ಮತ್ತು ಓರ್ವೆ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕಿ ಕೆಂಪುಕಲ್ಲಿನ ಹೊಂಡದಲ್ಲಿ ತುಂಬಿದ್ದ ನೀರಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಬಾಡೂರು ಬಳಿ ಸಂಭವಿಸಿದೆ.
ಬಾಡೂರು ಬಳಿ ಓಣಿಬಾಗಿಲು ಎಂಬಲ್ಲಿ ಮುಹಮ್ಮದ್-ಖದೀಜತ್ ಕುಬ್ರಾ ದಂಪತಿಯ ಪುತ್ರಿ ಬಾಡೂರುಪದವು ಎಎಲ್ಪಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಫಾತಿಮಾ ಹಿಬಾ (8) ಸಾವನ್ನಪ್ಪಿದ ದುರ್ದೈವಿ. ನಿನ್ನೆ ಸಂಜೆ ಫಾತಿಮಾ ಹಿಬಾ ಇತರ ಮಕ್ಕಳೊಂದಿಗೆ ಮನೆ ಪಕ್ಕದ ಮಳೆ ನೀರು ತುಂಬಿದ್ದ ಕೆಂಪು ಕಲ್ಲಿನ ಹೊಂಡದ ಬಳಿ ಆಡುತ್ತಿದ್ದರು. ಈ ವೇಳೆ ಬಾಲಕಿ ಅಕಸ್ಮಾತ್ ಕೆಂಪುಕಲ್ಲಿನ ಹೊಂಡಕ್ಕೆ ಬಿದ್ದಿದ್ದಾಳೆ. ಜತೆಗಿದ್ದ ಮಕ್ಕಳು ಬೊಬ್ಬೆ ಹಾಕಿದಾಗ ಮನೆಯವರು ಹಾಗೂ ಸ್ಥಳೀಯರು ಅಲ್ಲಿಗೆ ತಲುಪಿ ತಕ್ಷಣ ಆಕೆಯನ್ನು ನೀರಿನಿಂದ ಮೇಲಕ್ಕೆತ್ತಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೃತ ಬಾಲಕಿ ಹೆತ್ತವರ ಹೊರತಾಗಿ ಸಹೋದರ ಮುಹಮ್ಮದ್ ರಿಯಾಸ್, ಸಹೋದರಿ ಆಯಿಷತ್ ಶಿಬಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.
ಇನ್ನೊಂದೆಡೆ ಮಂಗಲ್ಪಾಡಿ ಬಳಿ ತೋಡಿನ ನೀರಿಗೆ ಬಿದ್ದು ಎಂಟು ವರ್ಷ ಪ್ರಾಯದ ಬಾಲಕ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಬಂದ್ಯೋಡು ಕೊಕ್ಕೆಚ್ಚಾಲ್ನ ಸಾಬಿತ್-ಹಾಜಿರಾ ದಂಪತಿಯ ಪುತ್ರ ನಯಾಬಜಾರ್ನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಸುಲ್ತಾನ್ (8) ಸಾವನ್ನಪ್ಪಿದ ದುರ್ದೈವಿ.
ನಿನ್ನೆ ಮಧ್ಯಾಹ್ನ ಮನೆ ಪಕ್ಕದ ತೋಡಿನ ಬಳಿ ನಡೆದುಕೊಂಡು ಹೋ ಗುತ್ತಿದ್ದ ವೇಳೆ ಅಕಸ್ಮಾತ್ ತೋಡಿನ ನೀರಿಗೆ ಬಿದ್ದಿರಬಹುದೆಂದು ಶಂಕಿಸಲಾ ಗುತ್ತಿದೆ. ನಾಪತ್ತೆಯಾದ ಆತನಿಗಾಗಿ ಅಗ್ನಿಶಾಮಕದಳ, ಊರವರು ಮತ್ತು ಪೊಲೀಸರು ವ್ಯಾಪಕ ಶೋಧ ನಡೆಸುತ್ತಿ ದ್ದಾಗ ಸಂಜೆ ಮನೆಯಿಂದ ೫೦೦ ಮೀ ಟರ್ ದೂರದ ತೋಡಿನಲ್ಲಿ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ತಕ್ಷಣ ಆತನನ್ನು ಬಂದ್ಯೋಡಿನ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾ ಗದೆ ಆತ ಸಾವನ್ನಪ್ಪಿದ್ದಾನೆ.
ಮೃತನು ಸಹೋದರ ಸಿದ್ದಿಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖ ನಡೆಸಿದ್ದಾರೆ.
ಇದೇ ರೀತಿ ಕಾಸರಗೋಡು ಕೂಡ್ಲು ರಾಮದಾಸನಗರ ಗಂಗೆ ರಸ್ತೆ ಬಳಿಯ ಗಣೇಶ್ ನಾಕ್ ಎಂಬವರ ಪತ್ನಿ ಭವಾನಿ (65) ಮನೆ ಪಕ್ಕದ ತೋಡಿನ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆಯೂ ನಡೆದಿದೆ.
ಭವಾನಿ ನಿನ್ನೆ ಬೆಳಿಗ್ಗೆ ಮನೆ ಪಕ್ಕದ ತೋಟಕ್ಕೆ ತೆರಳಿದ್ದರೆನ್ನಲಾಗಿದೆ. ತಡವಾದರೂ ಅವರು ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಪುತ್ರ ನವೀನ್ ಕುಮಾರ್ ಆಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಕಾಸರಗೋಡು ಅಗ್ನಿಶಾಮಕದಳ ವ್ಯಾಪಕ ಶೋಧ ನಡೆಸಿದರೂ ಭವಾನಿ ಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಬಳಿಕ ಮನೆಯವರು ಇಂದು ಬೆಳಿಗ್ಗೆ ಮತ್ತೆ ಶೋಧ ಮುಂದುವರಿಸಿದಾಗ ಮನೆ ಪಕ್ಕದ ತೋಡಿನ ಅಲ್ಪ ದೂರದಲ್ಲಿ ಭವಾನಿಯವರ ಮೃತದೇಹ ಪತ್ತೆ ಯಾಗಿದೆ.
ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು.
ಮೃತರು ಪತಿ, ಮಕ್ಕಳಾದ ನವೀನ್ ಕುಮಾರ್, ನಯನ, ಅಳಿಯ ಶಿವರಾಮ ನಾಕ್, ಸೊಸೆ ಅಸ್ಮಿತ, ಸಹೋದರರಾದ ಬಾಲಕೃಷ್ಣ, ದಿನೇಶ್, ಸಹೋದರಿ ಬೇಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಕಣ್ಣೂರು ಸಮೀಪದ ಕೊಟ್ಟಿಯೂರು ಕ್ಷೇತ್ರ ದರ್ಶನಕ್ಕೆಂದು ಹೋಗಿ ಅಲ್ಲಿನ ಬಾವಲಿ ಹೊಳೆಯಲ್ಲಿ ಮೊನ್ನೆ ಸ್ನಾನಕ್ಕಿಳಿದಾಗ ನೀರಿನ ಸೆಳೆತಕ್ಕೊಳಗಾಗಿ ನಾಪತ್ತೆಯಾದ ಹೊಸದುರ್ಗ ಚಿತ್ತಾರಿ ಸಮೀಪದ ಚಾಮುಂಡಿಕುನ್ನು ವೀಟಿಲ್ನ ಎಂ.ವಿ. ಅಭಿಜಿತ್ (30)ನನ್ನು ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ.