ತೆಂಗಿನೆತ್ತರಕ್ಕೆ ಬೆಳೆದ ತೆಂಗಿನಕಾಯಿ ದರ: ಕಳವುಗೈದ ಆರೋಪಿ ಸೆರೆ
ಕಾಸರಗೋಡು: ತೆಂಗಿನ ಕಾಯಿಯ ಬೆಲೆ ಸಾರ್ವಕಾಲಿಕ ದಾಖಲೆಯಲ್ಲಿ. 1 ಕಿಲೋ ಕಾಯಿಗೆ ನಿನ್ನೆ 72 ರೂ.ನಿಂದ 74 ರೂ.ವರೆಗೆ ಕೃಷಿಕರಿಗೆ ಲಭಿಸಿದೆ. ಉತ್ತಮ ತೆಂಗಿನಕಾಯಿಗೆ 74 ರೂ.ನಂತೆ ಖರೀದಿಸಿರುವುದಾಗಿ ಪೆರಿಯದ ಓರ್ವ ವ್ಯಾಪಾರಿ ತಿಳಿಸಿದ್ದಾರೆ. ತೆಂಗಿನೆಣ್ಣೆಯ ಬೆಲೆಯೂ ಗಗನಕ್ಕೇರುತ್ತಿದೆ. ಈಗ 400 ರೂ. ದರದಲ್ಲಿ ಲೀಟರ್ ತೆಂಗಿನೆಣ್ಣೆ ಮಾರಾಟವಾಗುತ್ತಿದೆ. ಇದು ಇನ್ನೂ ಹೆಚ್ಚಲು ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ತೆಂಗಿನಕಾಯಿ ಬೆಲೆ ಹೆಚ್ಚಳವಾಗುತ್ತಿರುವಾಗಲೇ ತೆಂಗಿನಕಾಯಿ ಕಳವು ಕೂಡಾ ಹೆಚ್ಚಾಗುತ್ತಿರುವುದಾಗಿ ಕೃಷಿಕರು ದೂರುತ್ತಾರೆ. 20ರಷ್ಟು ತೆಂಗಿನಕಾಯಿ ಕಳವುಗೈದ ವ್ಯಕ್ತಿಯನ್ನು ಬೇಡಡ್ಕ ಪೊಲೀಸರು ಬಂಧಿಸಿದ್ದಾರೆ.
ಮೂನಾಡ್ ಜಯಪುರದ ಮಣಿ (34)ನನ್ನು ಸೆರೆ ಹಿಡಿಯಲಾಗಿದೆ. ಪಾಯಂನ ಎಂ. ರಾಧಾಕೃಷ್ಣನ್ ನೀಡಿದ ದೂರಿನಂತೆ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಪೆರಿಂಙಾನದ ತೋಟದಲ್ಲಿ ಬಿದ್ದಿದ್ದ 80 ಕಿಲೋದಷ್ಟು ತೂಕದ 200 ತೆಂಗಿನಕಾಯಿಗಳನ್ನು ಕಳವುಗೈದಿರುವುದಾಗಿ ಪೊಲೀಸರು ದಾಖಲಿಸಿದ ದೂರಿನಲ್ಲಿ ತಿಳಿಸಲಾಗಿದೆ. 56೦೦ ರೂ. ನಷ್ಟ ಅಂದಾಜಿಸಲಾಗಿದೆ. ಇದೇ ವೇಳೆ ಹೊಳೆ ಹಾಗೂ ತೋಡುಗಳಲ್ಲಿ ಹರಿದು ಬರುವ ತೆಂಗಿನಕಾಯಿಗಳನ್ನು ಹಿಡಿಯುವವರು ಈ ಬಾರಿ ನಿರಾಶೆ ಹೊಂದಿದ್ದಾರೆ. ಈ ಮೊದಲು ಪ್ರತೀ ದಿನ 100ರಷ್ಟು ತೆಂಗಿನಕಾಯಿಗಳು ಲಭಿಸುತ್ತಿದ್ದರೆ ಈಗ ೧೦ಕ್ಕಿಂತಲೂ ಕಡಿಮೆ ತೆಂಗಿನಕಾಯಿಗಳು ಮಾತ್ರವೇ ಈ ರೀತಿ ಲಭಿಸುತ್ತಿರುವುದಾಗಿ ಹೇಳಲಾಗುತ್ತಿದೆ. ಉತ್ತಮ ಬೆಲೆ ಲಭಿಸುವ ಕಾರಣ ತೆಂಗಿನಕಾಯಿಗಳು ನಷ್ಟವಾಗದಂತೆ ಕೃಷಿಕರು ಜಾಗರೂಕರಾಗಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.
ರಬ್ಬರ್ ಬೆಲೆಯಲ್ಲೂ ಏರಿಕೆ ಕಂಡು ಬರುತ್ತಿದೆ ಎಂದು ಕೃಷಿಕರು ಹೇಳುತ್ತಾರೆ. ಕೋಟಯಂ ಮಾರುಕಟ್ಟೆಯಲ್ಲಿ ದರ 200 ರೂ. ದಾಟಿದೆ. ವೆಳ್ಳರಿಕುಂಡ್, ಪೆರಿಯ ಮಾರುಕಟ್ಟೆಗಳಲ್ಲಿ 197 ರೂ. ರಬ್ಬರ್ಗೆ ನಿನ್ನೆ ಲಭಿಸಿದೆ. 490 ರೂ. ವರೆಗೆ ತಲುಪಿದ ಅಡಿಕೆ ಬೆಲೆ 475ರಲ್ಲಿ ಸ್ಥಿರವಾಗಿ ನಿಂತಿದೆ. ಕಾಳುಮೆಣಸು ಬೆಲೆಯಲ್ಲೂ 10 ರೂ. ಹೆಚ್ಚಳವಾಗಿ 650ಕ್ಕೆ ತಲುಪಿದೆ.