ಭ್ರಷ್ಟಾಚಾರ ಆಡಳಿತ ಆರೋಪಿಸಿ ಕುಂಬಳೆ ಪಂಚಾಯತ್ ಕಚೇರಿಗೆ ಸಿಪಿಎಂ ಮಾರ್ಚ್
ಕುಂಬಳೆ: ಕುಂಬಳೆ ಪಂಚಾಯತ್ ನಲ್ಲಿ ಭ್ರಷ್ಟಾಚಾರ ಆಡಳಿತ ವ್ಯಾಪಕಗೊಂಡಿರುವುದಾಗಿ ಆರೋಪಿಸಿ ಸಿಪಿಎಂ ಕುಂಬಳೆ ಲೋಕಲ್ ಕಮಿಟಿ ಪಂಚಾಯತ್ ಕಚೇರಿಗೆ ನಿನ್ನೆ ಮಾರ್ಚ್ ನಡೆಸಿತು. ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ಉದ್ಘಾಟಿಸಿದರು. ಕುಂಬಳೆ ಪಂಚಾಯತ್‌ನಲ್ಲಿ ಆಡಳಿತ ನಡೆಸುವವರು ಕೊಳ್ಳೆಹೊಡೆಯುವ ತಂಡದಂತೆ ವರ್ತಿಸುತ್ತಿದ್ದಾರೆಂದು ಅವರು ಆರೋಪಿಸಿದರು. ಜನರ ತೆರಿಗೆ ಹಣವನ್ನು ಕೊಳ್ಳೆಹೊಡೆದು ಅಭಿವೃದ್ಧಿ ಇಲ್ಲದಂತೆ ಮಾಡಲಾಗಿದೆ. ಪಂಚಾಯತ್ ಆಡಳಿತ ಸಮಿತಿ ಜನಪರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಮುಟ್ಟಿದ್ದೆಲ್ಲದರಲ್ಲೂ ಭ್ರಷ್ಟಾಚಾರ ನಡೆಸಿ ಕುಂಬಳೆಯ ಜನತೆಗೆ ಸವಾಲಾಗಿ ಪರಿಣಮಿಸಿದೆಯೆಂದು ಸುಬೈರ್ ತಿಳಿಸಿದರು. ಲೋಕಲ್ ಸೆಕ್ರೆಟರಿ ಕೆ.ಬಿ.ಯೂಸಫ್, ಬಂಬ್ರಾಣ ಲೋಕಲ್ ಸೆಕ್ರೆಟರಿ ಸುಬ್ರಹ್ಮಣ್ಯ, ಜಿ. ರತ್ನಾಕರ ನೇತೃತ್ವ ನೀಡಿದರು. ಪಿ. ರಘುದೇವನ್ ಮಾಸ್ತರ್, ಜಿ. ರತ್ನಾಕರ, ಸುಬ್ರಹ್ಮಣ್ಯ ಮಾತನಾಡಿ ದರು. ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಬೃಹತ್ ಚಳವಳಿಗೆ ಸಿಪಿಎಂ ನೇತೃತ್ವ ನೀಡಲಿದೆಯೆಂದು ಮಾರ್ಚ್‌ನಲ್ಲಿ ಮುನ್ನೆಚ್ಚರಿಕೆ ನೀಡಲಾಯಿತು.