ಮೊಟಕುಗೊಂಡ ಮರಣೋತ್ತರ ಪರೀಕ್ಷೆ : ಜನರಲ್ ಆಸ್ಪತ್ರೆ ಮುಂದೆ ಬಿಜೆಪಿ ಜಿಲ್ಲಾಧ್ಯಕ್ಷೆ ನೇತೃತ್ವದಲ್ಲಿ ಪ್ರತಿಭಟನೆ

ಕಾಸರಗೋಡು: ಮೃತದೇಹವನ್ನು ಸಕಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸದಿರುವುದನ್ನು ಪ್ರತಿಭಟಿಸಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನೇತೃತ್ವದಲ್ಲಿ ಕಾರ್ಯಕರ್ತರು ಕಾಸರಗೋಡು ಜನರಲ್ ಆಸ್ಪತ್ರೆ ಮುಂದೆ ನೆಲದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಬೆದ್ರಡ್ಕದಲ್ಲಿರುವ ಖಾಸಗಿ ಸಂಸ್ಥೆಯೊಂದರ ಗೋದಾಮಿನ ವಾಹನ ಚಾಲಕ ಮಧೂರು ಶಿರಿಬಾಗಿಲು ನಿವಾಸಿ ಚನಿಯಪ್ಪ ಪೂಜಾರಿ (54) ಎಂಬವರು ನಿನ್ನೆ ಕೆಲಸದ ಮಧ್ಯೆ ಕುಸಿದುಬಿದ್ದಿದ್ದರು. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ   ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು.   ಪೊಲೀಸರು ಆಸ್ಪತ್ರೆಗೆ ಆಗಮಿಸಿ ಮೃತದೇಹದ ಮಹಜರು ಪೂರ್ಣಗೊಳಿಸಿದರೂ ಸಂಜೆ ತನಕ ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸುವ ವೈದ್ಯರಿಲ್ಲವೆಂದೂ ಆದ್ದರಿಂದ ನಾಳೆ ನಡೆಸಲಾಗುವುದೆಂದು ಆಸ್ಪತ್ರೆ ಅಧಿಕಾರಿಗಳು ಮೃತರ ಸಂಬಂಧಿಕರಲ್ಲಿ ತಿಳಿಸಿದ್ದರು. ಆ ವಿಷಯ ತಿಳಿದ ಬಿಜೆಪಿ ಜಿಲ್ಲಾಧ್ಯಕ್ಷೆ ಮತ್ತು  ಹೆಚ್ಚಿನ ಸಂಖ್ಯೆಯಲ್ಲಿ  ಕಾರ್ಯಕರ್ತರು ನಿನ್ನೆ ಸಂಜೆ ಜನರಲ್ ಆಸ್ಪತ್ರೆಗೆ ತಲುಪಿ ಮರಣೋತ್ತರ ಪರೀಕ್ಷೆ ನಡೆಸದಿರುವುದನ್ನು ಪ್ರತಿಭಟಿಸಿ ಆಸ್ಪತ್ರೆ ಮುಂದೆ ನೆಲದಲ್ಲಿ ಕುಳಿತು ಘೋಷಣೆ ಮೊಳಗಿಸತೊಡಗಿದರು.  ಅಲ್ಲದೆ ಬಿಜೆಪಿ ಜಿಲ್ಲಾಧ್ಯಕ್ಷೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗೆ ತಕ್ಷಣ ಫೋನ್ ಕರೆ ಮಾಡಿ ವಿಷಯ ತಿಳಿಸಿದರೂ ಮೊದಲು ಅದಕ್ಕೆ ಸೂಕ್ತ ಪ್ರತಿಕ್ರಿಯೆ ಲಭಿಸಲಿಲ್ಲ. ಕೊನೆಗೆ ಜಿಲ್ಲಾಧಿಕಾರಿ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ  ರಾತ್ರಿ ವೇಳೆ ಕೊನೆಗೂ ಮೃತದೇಹದ ಮರಣೋ ತ್ತರ ಪರೀಕ್ಷೆ ನೆರವೇರಿಸ ಲಾಯಿತು. ಆ ಬಳಿಕ ಬಿಜೆಪಿ ಕಾರ್ಯಕರ್ತರು ಅಲ್ಲಿಂದ ಮರಳಿದರು. 

ರಾಜ್ಯದಲ್ಲಿ ರಾತ್ರಿ ವೇಳೆಯಲ್ಲೂ ಮರಣೋತ್ತರ ಪರೀಕ್ಷೆ ನಡೆಸುವ ಏಕೈಕ ಆಸ್ಪತ್ರೆಯಾಗಿದೆ ಕಾಸರಗೋಡು ಜನರಲ್ ಆಸ್ಪತ್ರೆ. ಮರಣೋತ್ತರ ಪರೀಕ್ಷೆಗಾಗಿ ಇಲ್ಲಿ ಇಬ್ಬರು ಫಾರೆನ್ಸಿಕ್ ಸರ್ಜನ್‌ರನ್ನು ನೇಮಿಸಲಾಗಿದೆ. ಅದರಲ್ಲಿ ಒಬ್ಬರು ಈಗಾಗಲೇ ಬೇರೆಡೆಗೆ ವರ್ಗಾವಣೆ ಗೊಂಡಿದ್ದಾರೆ. ಇನ್ನೋರ್ವ ಫಾರೆನ್ಸಿಕ್ ಸರ್ಜನ್‌ರನ್ನು ಬೇರೆಡೆಗೆ ವರ್ಗಾಯಿಸುವ ಯತ್ನ ನಡೆಯುತ್ತಿದೆ.  ಇದರಿಂದಾಗಿ ಜನರಲ್ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ಮೊಟಕುಗೊಳ್ಳುತ್ತಿರುವುದು ಇತ್ತೀಚೆಗಿನಿಂದ ಸಾಮಾನ್ಯವಾಗಿದೆ. ಇದನ್ನು ಪ್ರತಿಭಟಿಸಿ ಬಿಜೆಪಿ ನೇತೃತ್ವದಲ್ಲಿ ಈ ಹಿಂದೆಯೂ ಜನರಲ್ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page