ಬಿಲ್ಡರ್‌ನ ಮನೆಯಿಂದ ೩೨.೪೬ ಲಕ್ಷ ರೂ. ನಗ-ನಗದು ಕಳವು: ಮಂಜೇಶ್ವರ ನಿವಾಸಿಗಾಗಿ ಹುಡುಕಾಟ

ತಲಪಾಡಿ: ಬಂಟ್ವಾಳ ಫರಂಗಿಪೇಟೆಯ ಬಿಲ್ಡರ್ ಓರ್ವರ ಮನೆಯಿಂದ ೩೨.೪೬ ಲಕ್ಷ ರೂ. ನಗ-ನಗದು ಕಳವು ನಡೆದಿದ್ದು, ಈ ಪ್ರಕರಣದಲ್ಲಿ  ಮಂಜೇಶ್ವರ ನಿವಾಸಿ ಕೆಲಸದಾಳು  ನಾಪತ್ತೆಯಾದ ಘಟನೆ ನಡೆದಿದೆ.

ಕೋಡಿಮಜಲು ನಿವಾಸಿ ಇಮಾರ್ ಬಿಲ್ಡರ್ಸ್ ಮಾಲಕ ಮೊಹಮ್ಮದ್ ಝಫಾರುಲ್ಲಾರ ಮನೆಯಿಂದ ಕಳವು ನಡೆಸಲಾಗಿದೆ. ಕಳೆದ ಕೆಲವು ತಿಂಗಳಿಂದ ಝಫಾರುಲ್ಲಾರಿಗೆ ಸಹಾಯಕನಾಗಿ ಮಂಜೇಶ್ವರ ನಿವಾಸಿ ಅಲಿ ಎಂಬಾತ ಕೆಲಸಕ್ಕೆ ಸೇರಿದ್ದ. ಈತನಲ್ಲಿ ಮಾಲಕನಿಗೆ ನಂಬುಗೆ ಮೂಡಿದ್ದು, ಕಳೆದ ೧೮ರಂದು ಮನೆಗೆ ಬೀಗ ಜಡಿದು ಕೀಲಿಯನ್ನು  ಅಲಿಯಲ್ಲಿ ನೀಡಿ ಢಫಾರುಲ್ಲಾ ಬೆಂಗಳೂರಿಗೆ ಕಾರ್ಯನಿಮಿತ್ತ ತೆರಳಿದ್ದರು. ೨೩ರಂದು ಹಿಂತಿರುಗಿ ಬಂದು ನೋಡಿದಾಗ ಅಲಿ ನಾಪತ್ತೆಯಾಗಿದ್ದಾನೆ. ಆತನ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮನೆಯನ್ನು ನೋಡಿದಾಗ ಕಪಾಟನ್ನು ಚೆಲ್ಲಾಪಿಲ್ಲಿಗಳಿಸಿ ಅಧರಲ್ಲಿದ್ದ ೨೭.೫೦ ಲಕ್ಷ ರೂ., ೪.೯೬ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ನಡೆಸಿರುವುದು ತಿಳಿದುಬಂದಿದೆ. ಕಳವು ನಡೆದ ಚಿನ್ನಾಭರಣದಲ್ಲಿ ಕೈಬಳಿ, ಉಂಗುರ, ಚೈನುಗಳು, ಕಿವಿಯೋಲೆ ಸೇರಿದೆ.

ಆಲಿ ನಾಪತ್ತೆ ಹಿನ್ನೆಲೆಯಲ್ಲಿ ಕಳವಿನಲ್ಲಿ ಈತನ ಕೈವಾಡವಿರ ಬಹುದೆಂಬ ಶಂಕೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಲಕ ದೂರು ನೀಡಿದ್ದಾರೆ. ಕೇಸು ದಾಖಲಿಸಿ ತನಿಖೆಗೆ ಚಾಲನೆ ನೀಡಲಾಗಿದೆ. ಅಲಿ ಮಂಜೇಶ್ವರ ನಿವಾಸಿಯಾದ ಕಾರಣ ಮಂಜೇಶ್ವರಕ್ಕೂ ತನಿಖೆ ವಿಸ್ತರಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

RELATED NEWS

You cannot copy contents of this page