ಜುಲೈ 8ರಂದು ಖಾಸಗಿ ಬಸ್ ಸೂಚನಾ ಮುಷ್ಕರ

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಈ ತಿಂಗಳ 8ರಂದು ಖಾಸಗಿ  ಬಸ್ ಸೇವೆಗಳನ್ನು ನಿಲ್ಲಿಸಿ ಸೂಚನಾ ಮುಷ್ಕರ ಹೂಡಲಾಗುವುದೆಂದು ಕೇರಳ ಸ್ಟೇಟ್ ಪ್ರೈವೆಟ್ ಬಸ್ ಆಪರೇಟರ್ಸ್ ಫೆಡರೇಶನ್‌ನ ಕಾಸರಗೋಡು ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದೀರ್ಘ ಕಾಲದಿಂದ ಸೇವೆ ನಡೆಸುತ್ತಿದ್ದ ಲಿಮಿಟೆಡ್ ಸ್ಟಾಪ್ ಬಸ್‌ಗಳು ಮತ್ತು ದೀರ್ಘದೂರ ಬಸ್‌ಗಳ ಪರ್ಮಿಟ್‌ಗಳನ್ನು ಸಕಾಲದಲ್ಲಿ ನವೀಕರಿಸಿ ನೀಡಬೇಕು, ಅರ್ಹತೆ ಹೊಂದಿರುವ ವಿದ್ಯಾರ್ಥಿ ಗಳಿಗೆ ಮಾತ್ರ ಯಾತ್ರಾ ದರದಲ್ಲಿ ರಿಯಾಯಿತಿ  ನೀಡಬೇಕು ಮತ್ತು ವಿದ್ಯಾರ್ಥಿಗಳ ಯಾತ್ರಾದರವನ್ನು  ಸಕಾಲದಲ್ಲಿ ಪರಿಷ್ಕರಿಸಬೇಕು,  ಬಸ್ ಕಾರ್ಮಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿದ ಕ್ರಮವನ್ನು ಹಿಂಪಡೆಯಬೇಕು, ಬಸ್ ಕಾರ್ಮಿಕರು ಯಾವುದಾದರೊಂದು  ರಾಜಕೀಯ ಸಂಘಟನೆಗಳ ಅಥವಾ ಸಾಮಾಜಿಕ ಸಂಘಟನೆಗಳಲ್ಲಿ ಸದಸ್ಯತನ ಹೊಂದಿದ್ದಲ್ಲಿ ಅಂತಹ ಸಂಘಟನೆಗಳು ನಡೆಸುವ ಚಳವಳಿಗಳ ಹೆಸರಲ್ಲಿ ಹಾಗೂ ರಸ್ತೆ ಅಪಘಾತಗಳ ಹೆಸರಲ್ಲಿ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಈಗ ಹೆಚ್ಚಾಗತೊಡಗಿದೆ. ವಲಸೆ ಕಾರ್ಮಿಕರು ಸೇವೆ ಸಲ್ಲಿಸದೆ ಇರುವ ಹಾಗೂ ಕೇರಳೀಯರು ಮಾತ್ರವೇ ಸಿಬ್ಬಂದಿ ಗಳಾಗಿ ದುಡಿಯುತ್ತಿರುವ ರಾಜ್ಯದ ಏಕೈಕ ಉದ್ಯೋಗ ವಲಯವಾಗಿದೆ ಬಸ್ ಉದ್ದಿಮೆ.

ಪೊಲೀಸ್ ಕ್ಲಿಯರೆನ್ಸ್ ಸರ್ಟಿ ಫಿಕೇಟ್ ಪಡೆಯದೆ ವಲಸೆ ಕಾರ್ಮಿಕರಿಗೆ ಕೇರಳದ ವಿವಿಧ ವಲಯಗಳಲ್ಲಿ ದುಡಿಯಲು ಅನುಮತಿ ನೀಡಲಾಗುತ್ತಿದೆ. ಆದರೆ ಕೇರಳದ ಬಸ್ ಕಾರ್ಮಿಕರಿಗೆ ಮಾತ್ರವಾಗಿ ಕ್ಲಿಯರೆನ್ಸ್ ಸರ್ಟಿಫಿಕೇಟನ್ನು ಕಡ್ಡಾಯಗೊಳಿಸುವ ಕ್ರಮ ಸರಿಯಲ್ಲ. ಇಂತಹ ಕ್ರಮ ಬಸ್ ಉದ್ಯಮದಲ್ಲಿ ದುಡಿಯಲು ಮುಂದೆ ಸಿಬ್ಬಂದಿಗಳು ಲಭಿಸದೇ ಇರುವ ಸ್ಥಿತಿ ನಿರ್ಮಿಸಬಹುದು. ಆದ್ದರಿಂದ ಕ್ಲಿಯರೆನ್ಸ್ ಸರ್ಟಿಫಿಕೇಟನ್ನು ಕಡ್ಡಾಯಗೊಳಿಸಲಾದ ಕಪ್ಪು ಕಾನೂನನ್ನು ಹಿಂತೆಗೆದು ಕೊಳ್ಳಬೇಕು. ಇ-ಚಲನ್ ಮೂಲಕ ದಂಡ ವಸೂಲಿ ಮಾಡುವ ಕ್ರಮವನ್ನು ಹಿಂತೆಗೆದುಕೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿಕೊಂಡು ಈ ಮುಷ್ಕರ ಹೂಡಲು ತೀರ್ಮಾನಿ ಲಾಗಿದೆ. ನಮ್ಮ ಬೇಡಿಕೆಯನ್ನು ಅಂಗೀಕರಿಸದಿದ್ದಲ್ಲಿ ಈ ತಿಂಗಳ 22ರಿಂದ ಬಸ್ ಸೇವೆಗಳನ್ನು ಮೊಟಕುಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ತೊಡಗುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಬಸ್ ಮಾಲಕರ ಸಂಘಟನೆಯ ಜಿಲ್ಲಾ ಅಧ್ಯಕ್ಷ ಗಿರೀಶ್ ಕೆ, ಕಾರ್ಯದರ್ಶಿ ಟಿ. ಲಕ್ಷ್ಮಣನ್, ಸೆಂಟ್ರಲ್ ಸಮಿತಿ ಸದಸ್ಯ ಸಿ.ಎ. ಮೊಹಮ್ಮದ್ ಕುಂಞಿ, ಉಪಾಧ್ಯಕ್ಷರುಗಳಾದ ಪಿ.ಎ. ಮಹಮ್ಮದ್ ಕುಂಞಿ, ಪದ್ಮ ನಾಭನ್, ಜತೆ ಕಾರ್ಯದರ್ಶಿ ಗಳಾದ ಶಂಕರ ನಾಯ್ಕ್, ಸುಕುಮಾ ರನ್ ಮತ್ತು ಕೋಶಾಧಿಕಾರಿ ರಾಜೇಶ್ ಮೊದಲಾದವರು ತಿಳಿಸಿದರು. ಇದು ಬಸ್ ದರ ಹೆಚ್ಚಿಸಬೇಕೆಂದು ಆಗ್ರಹಿಸಿ  ನಡೆಸುವ ಮುಷ್ಕರವಲ್ಲ, 15 ವರ್ಷಗಳ ಹಿಂದೆ ರಾಜ್ಯದಲ್ಲಿ 34000ದಷ್ಟು ಖಾಸಗಿ ಬಸ್‌ಗಳು ಸೇವೆ ಸಲ್ಲಿಸುತ್ತಿದ್ದವು. ಆದರೆ ಸಾರಿಗೆ ಇಲಾಖೆಯ ಅವೈಜ್ಞಾನಿಕ ನೀತಿಯ ಕಾರಣದಿಂದ ಆ ಸಂಖ್ಯೆ 8000ಕ್ಕೆ ಕುಸಿದಿದೆ ಎಂದೂ ಪದಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page