ಮನೆಗೆ ಗುಂಡು ಹಾರಾಟ: ತನಿಖೆ ತೀವ್ರ
ಮಂಜೇಶ್ವರ: ವರ್ಕಾಡಿ ಬಳಿ ಮನೆಯೊಂದರ ಮೇಲೆ ನಡೆದ ಗುಂಡು ಹಾರಾಟ ಪ್ರಕರಣದ ಬಗ್ಗೆ ತನಿಖೆ ತೀವ್ರಗೊಳಿಸಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ಮನೆ ಯೊಳಗೆ ಪತ್ತೆಯಾದ ಮದ್ದುಗುಂಡನ್ನು ಫಾರೆನ್ಸಿಕ್ ತನಿಖೆಗಾಗಿ ಕೊಂಡೊ ಯ್ಯಲಾಗಿದೆ. ಗುಂಡು ಹಾರಿಸಿದ ವ್ಯಕ್ತಿಗಳ ಪತ್ತೆಗಾಗಿ ತನಿಖೆ ನಡೆಸಲಾ ಗುತ್ತಿದೆ. ಘಟನೆ ಬಳಿಕ ಆರೋಪಿಗಳು ಕಾರು ಹಾಗೂ ಸ್ಕೂಟರ್‌ಗಳಲ್ಲಿ ಪರಾರಿಯಾಗಿರುವುದಾಗಿ ಖಚಿತಪಡಿಸಲಾಗಿದೆ. ಅವುಗಳನ್ನು ಪತ್ತೆಹಚ್ಚಲು ವಿವಿಧ ಪ್ರದೇಶಗಳಲ್ಲಿರುವ ಸಿಸಿ ಕ್ಯಾಮರಾಗಳನ್ನೂ ಪರಿಶೀಲಿ ಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರ್ಕಾಡಿ ಜಂಕ್ಷನ್‌ಬಳಿಯ ನಲ್ಲೆಂಗಿಪದವು ನಿವಾಸಿ ಹರೀಶ ಬಿ.ಎಂ. ಎಂಬವರ ಮನೆ ಮೇಲೆ ಈ ತಿಂಗಳ 2ರಂದು ಮುಂಜಾನೆ 2.30ರ ವೇಳೆ ಗುಂಡು ಹಾರಿಸಲಾಗಿದೆ. ಗುಂಡು ತಗಲಿ ಕಿಟಿಕಿಯ ಗಾಜು ಪುಡಿಗೈಯ್ಯಲ್ಪಟ್ಟಿದೆ. ಭಾರೀ ಶಬ್ದ ಕೇಳಿ ಮನೆಯವರು ಎಚ್ಚೆತ್ತು ಶೋಧ ನಡೆಸಿದಾಗ ಕೊಠಡಿಯೊಳಗೆ ಗುಂಡು ಪತ್ತೆಯಾಗಿತ್ತು.