ಕಾಸರಗೋಡು ನಗರಸಭೆ ವಾರ್ಡ್ ವಿಭಜನೆಯಲ್ಲಿ ವಂಚನೆ: ವಾರ್ಡ್ ವಿಭಜನೆ ವಿಜ್ಞಾಪನೆಗೆ ಹೈಕೋರ್ಟ್ ತಡೆ
ಕಾಸರಗೋಡು: ಕಾಸರಗೋಡು ನಗರಸಭೆ ವಾರ್ಡ್ ವಿಭಜನೆ ವಿಜ್ಞಾಪನೆಯನ್ನು ಹೈಕೋರ್ಟ್ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ವಾರ್ಡ್ ವಿಭಜನೆಯಲ್ಲಿ ಅವೈಜ್ಞಾನಿಕ ಹಾಗೂ ವಂಚನೆ ನಡೆದಿದೆ ಎಂದು ಮುಸ್ಲಿಂ ಲೀಗ್ ಮುನ್ಸಿಪಲ್ ಕಮಿಟಿ ಅಧ್ಯಕ್ಷ ಕೆ.ಎಂ. ಬಶೀರ್ ನೀಡಿದ ದೂರಿನಂತೆ ನ್ಯಾಯಾಲಯ ಈ ನಿರ್ದೇಶ ನೀಡಿದೆ. ತೆರುವತ್ ವಾರ್ಡ್‌ನ ಸ್ವಾಭಾವಿಕ ಗಡಿಯಾದ ಹಾಶಿಂ ಸ್ಟ್ರೀಟ್ ರಸ್ತೆಯ ಎರಡು ಭಾಗವನ್ನು ಆ ವಾರ್ಡ್‌ನಲ್ಲಿ ಸೇರಿಸಲಾಗಿದೆ ಎಂದೂ, ಹಲವು ವಾರ್ಡ್‌ಗಳಲ್ಲೂ ಸ್ವಾಭಾವಿಕ ಗಡಿ ಇಲ್ಲದಾಗಿದೆ ಎಂದೂ, ಫಿಶ್ ಮಾರ್ಕೆಟ್ ವಾರ್ಡ್‌ನ ಒಂದು ಫ್ಲೋಟ್ ಸಮುಚ್ಚಯ ಜನಸಂಖ್ಯೆ ಕಡಿಮೆಯಾಗಿದ್ದರೂ ದೂರದ ತಳಂಗರೆ ದೀನಾರ್ ನಗರ ವಾರ್ಡ್‌ನಲ್ಲಿ ಒಳಪಡಿಸಲಾಗಿದೆ ಎಂದೂ, ೭ನೇ ವಾರ್ಡ್ ಆದ ಕೋಟೆಕಣಿ, ೩೭ನೇ ವಾರ್ಡ್ ಆದ ಕಡಪ್ಪುರಂ ಸೌತ್, ೩೯ನೇ ವಾರ್ಡ್ ಆದ ಲೈಟ್‌ಹೌಸ್ ಎಂಬೆಡೆಗಳಲ್ಲೂ ವಾರ್ಡ್ ವಿಭಜನೆ ಮಾರ್ಗ ನಿರ್ದೇಶಗಳಿಗೆ ವಿರುದ್ಧವಾಗಿ ವಾರ್ಡ್ ವಿಭಜನೆ ನಡೆಸಲಾಗಿದೆ ಎಂದೂ ದೂರುದಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ನ್ಯಾಯಾಲಯ ಆ ಬಗ್ಗೆ ವಿರುದ್ಧ ಕಕ್ಷಿಗಳಾದ ಸ್ಥಳೀಯಾಡಳಿತ ಇಲಾಖೆ ಪ್ರಿನ್ಸಿಪಲ್ ಸೆಕ್ರೆಟರಿ, ಸ್ಟೇಟ್ ಇಲೆಕ್ಷನ್ ಕಮಿಷನರ್, ಸ್ಟೇಟ್ ಇಲೆಕ್ಷನ್ ಸೆಕ್ರೆಟರಿ, ಜಿಲ್ಲಾ ಇಲೆಕ್ಷನ್ ಆಫೀಸರ್, ಮುನ್ಸಿಪಲ್ ಸೆಕ್ರೆಟರಿ, ಮುನ್ಸಿಪಲ್ ಕಮಿಷನರ್ ಎಂಬಿವರೊಂದಿಗೆ ಅಫಿದಾವಿತ್ ಸಲ್ಲಿಸಲು ನಿರ್ದೇಶಿಸಿದೆ. ರಿಟ್ ಪಿಟಿಶನ್ ನಿರ್ಧಾರ ಅನುಸರಿಸಿ ಮಾತ್ರವೇ ಕಾಸರಗೋಡು ನಗರಸಭೆಯ ವಾರ್ಡ್ ವಿಭಜನೆ ವಿಜ್ಞಾಪನೆ ಹೊರಡಿಸಬಹುದಾಗಿದೆ ಎಂದು ಸಂಬಂಧಪಟ್ಟವರಿಗೆ ನ್ಯಾಯಾಲಯ ನಿರ್ದೇಶಿಸಿದೆ.