ಮುಂದುವರಿಯುತ್ತಿರುವ ಅಬಕಾರಿ ಕಾರ್ಯಾಚರಣೆ: ಗಾಂಜಾ, ಅಕ್ರಮ ಮದ್ಯ ವಶ: ವಲಸೆ ಕಾರ್ಮಿಕ ಸೇರಿ ಮೂವರ ಸೆರೆ
ಕಾಸರಗೋಡು: ಅಬಕಾರಿ ತಂಡ ನಡೆಸುತ್ತಿರುವ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದ್ದು ಇದರಂತೆ ನಿನ್ನೆ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಡೆಸಲಾದ ಕಾರ್ಯಾಚರಣೆಯಲ್ಲಿ ಗಾಂಜಾ ಮತ್ತು ಅಕ್ರಮ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂ ಧಿಸಿ ವಲಸೆ ಕಾರ್ಮಿಕ ಸೇರದಂತೆ ಮೂವರನ್ನು ಸೆರೆಹಿಡಿಯಲಾಗಿದೆ.
ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ ಆದರ್ಶ್.ಜಿ ನೇತೃತ್ವದ ಅಬಕಾರಿ ತಂಡ ನಿನ್ನೆ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಕೆ.ಎಸ್.ಆರ್.ಟಿ.ಸಿ ಬಸ್ಸೊಂದರಲ್ಲಿ 10 ಗ್ರಾಂ ಗಾಂಜಾ ಕೈವಶವಿರಿಸಿಕೊಂಡ ಆರೋಪದಂತೆ ವಲಸೆ ಕಾರ್ಮಿಕ ಉತ್ತರ ಪ್ರದೇಶ ಗೊಂಡಾ ಜಿಲ್ಲೆಯ ಡೌರಿಯಾ ಅಲವಾನ್ ನಿವಾಸಿ ಮಹ ಫೂಶ್‌ಖಾನ್ (27) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.
ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ವಿನಯರಾಜ್ ಪಿ.ಕೆ ಮತ್ತು ಅಬಕಾರಿ ಇಲಾಖೆಯ ಇತರ ಸಿಬ್ಬಂದಿ ಗಳಾದ ಪ್ರಭಾಕರನ್ ಎಂ.ಎ ಮತ್ತು ಜನಾರ್ದನನ್ ಎನ್ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.
ಇನ್ನೊಂದೆಡೆ ಬದಿಯಡ್ಕ ಎಕ್ಸೈಸ್ ರೇಂಜ್ ಕಚೇರಿಯ ಇನ್‌ಸ್ಪೆಕ್ಟರ್ ಜಿಷ್ಣು ಪಿ.ಆರ್ ನೇತೃತ್ವದ ತಂಡ ಮುಂಡ್ಯತ್ತಡ್ಕದಲ್ಲಿ ನಿನ್ನೆ ನಡೆಸಿದ ದಾಳಿಯಲ್ಲಿ 3.6 ಲೀಟರ್ ಕರ್ನಾಟಕ ಮದ್ಯ ಕೈವಶವಿರಿಸಿಕೊಂಡ ಆರೋಪದಂತೆ ಶೇಣಿ ಸರಳಿ ನಿವಾಸಿ ಲೋಕಯ್ಯ ಪೂಜಾರಿ (೫೫) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಪ್ರಿವೆಂಟೀವ್ ಆಫೀಸರ್ ಸಾಬು ಕೆ, ಸಿವಿಲ್‌ಎಕ್ಸೈಸ್ ಆಫೀಸರ್‌ಗಳಾದ ಹಮೀದ್ ಎಂ, ಲಿಜು ಜಿ.ಎಸ್, ಲಿಜಿನ್ ಆರ್,ಟಿಪ್ಸನ್ ಟಿ.ಜೆ ಮತ್ತು ಧನ್ಯ ಟಿ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.
ಕಳನಾಡು ಮೇಲ್ಪರಂಬದಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ (ಗ್ರೇಡ್) ಪ್ರಮೋದ್ ಕುಮಾರ್ ನೇತೃತ್ವದ ಅಬಕಾರಿ ತಂಡ ಸ್ಕೂಟರೊಂದರಲ್ಲಿ ಸಾಗಿಸುತ್ತಿದ್ದ 5.04 ಲೀಟರ್ ಗೋವಾ ನಿರ್ಮಿತ ಹಾಗೂ 4.14 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕಳನಾಡು ಕೈನೋತ್ತ್ ನಿವಾಸಿ ಉದಯನ್ ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಇತ್ತೀಚೆಗೆ ಅಬಕಾರಿ ತಂಡ ಆರೋಪಿ ಉದಯನ್ ಮನೆಗೆ ದಾಳಿ ನಡೆಸಿದಾಗ ಸಾಕುನಾಯಿ ಮೂಲಕ ಅಬಕಾರಿ ತಂಡದ ಸಿಬ್ಬಂದಿಗಳಿಗೆ ಕಚ್ಚಿಸಿ ಗಾಯಗೊಳಿಸಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರೋಪಿಯೂ ಈತನಾಗಿದ್ದಾನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಸಿಕೆವಿ ಸುರಶ್, ಸಿಇಒ ಶಿಜಿತ್ ವಿ.ವಿ., ಅತಲ್ ಟಿ.ವಿ ಮತ್ತು ರಾಜೇಶ್ ಪಿ ಎಂಬವರು ಒಳಗೊಂಡಿದ್ದರು.
ಇನ್ನೊಂದೆಡೆ ಕುಬಣೂರಿನ ಹಿತ್ತಿಲೊಂದರಲ್ಲಿ ಅಕ್ರಮವಾಗಿ ಬಚ್ಚಿ ಟ್ಟಿದ್ದ 180 ಎಂಎಲ್‌ನ ೪೫ ಪ್ಲಾಸ್ಟಿಕ್ ಬಾಟಲಿ (8.1 ಲೀಟರ್) ಕರ್ನಾಟಕ ನಿರ್ಮಿತ ಮದ್ಯವನ್ನು ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಪ್ರಮೋದ್ ಕುಮಾರ್‌ರ ನೇತೃತ್ವದ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸಿಕೆವಿ ಸುರೇಶ್, ಸಿಇಒ ಶಿಜಿತ್ ಎಂ.ವಿ ಎಂಬಿವರು ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.
ಇದೇ ರೀತಿ ಕಾಸರಗೋಡು ಎಕ್ಸೈಸ್ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ವಿನೋದ್ ಕೆ.ವಿ ನೇತೃ ತ್ವದ ಅಬಕಾರಿ ತಂಡ ನಿನ್ನೆ ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಜನವಾಸವಿಲ್ಲದ ಹಿತ್ತಿಲೊಂದರಲ್ಲಿ ಬಚ್ಚಿಡಲಾಗಿದ್ದ ೪.೬೮ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಅಬಕಾರಿ ಸಿಬ್ಬಂದಿಗಳಾದ ಅನುರಾಗ್ ಮತ್ತು ಶಾಂಜಿತ್ ಎಂ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.