ಖಾಸಗಿ ಬಸ್ ಮುಷ್ಕರ ಪೂರ್ಣ: ಸಂಕಷ್ಟಕ್ಕೀಡಾದ ಪ್ರಯಾಣಿಕರು
ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಖಾಸಗಿ ಬಸ್ ಮಾಲಕರು ತಮ್ಮ ಬಸ್ ಸೇವೆಗಳನ್ನು ನಿಲುಗಡೆಗೊಳಿಸಿ ಇಂದು ಬೆಳಿಗ್ಗೆ ಆರಂಭಿಸಿರುವ ಸೂಚನಾ ಮುಷ್ಕರ ಪೂರ್ಣಗೊಂ ಡಿದೆ. ಇದರಂಗವಾಗಿ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೊಳಗಾಗಬೇಕಾಗಿ ಬಂದಿದೆ.
ಬಸ್ ಮುಷ್ಕರ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮ ಬೀರಿದೆ. ಪ್ರಯಾಣಕ್ಕಾಗಿ ಖಾಸಗಿ ಬಸ್ಗಳನ್ನು ಮಾತ್ರವೇ ಆಶ್ರಯಿಸುತ್ತಿರುವ ಪ್ರದೇಶಗಳ ಜನರು ತೀವ್ರ ಸಂಕಷ್ಟಕ್ಕೊಳಗಾದರು.
ಖಾಸಗಿ ಬಸ್ಗಳ ಮುಷ್ಕರದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಇಂದು ಜಿಲ್ಲೆಯ ವಿವಿಧೆಡೆಗಳಲ್ಲಿ ಏಳು ಹೆಚ್ಚುವರಿ ಬಸ್ ಸೇವೆ ಏರ್ಪಡಿಸಿದೆ. ಕೆಎಸ್ಆರ್ಟಿಸಿಯ ಎಲ್ಲಾ ಬಸ್ಗಳಲ್ಲೂ ಪ್ರಯಾಣಿಕರ ಭಾರೀ ನಿಬಿಡತೆ ಅನುಭವಗೊಂಡಿದೆ. ಮುಷ್ಕರ ವಿದ್ಯಾರ್ಥಿಗಳ ಪ್ರಯಾಣದ ಮೇಲೂ ತೀವ್ರ ಪರಿಣಾಮ ಬೀರಿದೆ.
ಅರ್ಹತೆ ಹೊಂದಿರುವವರಿಗೆ ಮಾತ್ರವೇ ಪ್ರಯಾಣದಲ್ಲಿ ರಿಯಾಯಿತಿ ನೀಡಬೇಕು, ವಿದ್ಯಾರ್ಥಿಗಳ ಪ್ರಯಾಣದರ ಪರಿಷ್ಕರಿಸಬೇಕು,ಲಿಮಿಟೆಡ್ ಸ್ಟಾಪ್ ಬಸ್ಗಳ ಮತ್ತು ದೀರ್ಘದೂರ ಬಸ್ಗಳ ಪರ್ಮಿಟ್ಗಳನ್ನು ಸಕಾಲದಲ್ಲಿ ನವೀಕರಿಸಬೇಕು, ಬಸ್ ಕಾರ್ಮಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿರುವುದನ್ನು ಹಿಂದಕ್ಕೆ ತೆಗೆದಕೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕೇರಳ ಸ್ಟೇಟ್ ಪ್ರೈವೆಟ್ ಬಸ್ ಆಪರೇಟರ್ಸ್ ಫೆಡರೇಶನ್ ನೇತೃತ್ವದಲ್ಲಿ ಇಂದು ರಾಜ್ಯವ್ಯಾಪಕ ಮುಷ್ಕರ ನಡೆಯುತ್ತಿದೆ.
ಮುಷ್ಕರ ಹಿಂತೆಗೆಯುವ ಬಗ್ಗೆ ನಿನ್ನೆ ತಿರುವನಂಪುರದಲ್ಲಿ ನಡೆದ ಸರಕಾರಿ ಮಟ್ಟದ ಚರ್ಚಾ ಸಭೆ ವಿಫಲಗೊಂಡಿತ್ತು. ಅದರಿಂದಾಗಿ ಬಸ್ ಮಾಲಕರು ಇಂದು ಮುಷ್ಕರ ಆರಂಭಿಸಿದ್ದಾರೆ. ನಮ್ಮ ಬೇಡಿಕೆಗಳನ್ನು ಅಂಗೀಕರಿಸದಿದ್ದಲ್ಲಿ ಜುಲೈ ೨೨ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಬಸ್ ಮಾಲಕರ ಸಂಘಟನೆ ತಿಳಿಸಿದೆ.