ಜ್ವರ ತಗಲಿ ಸಾವನ್ನಪ್ಪಿದ ಮಹಿಳೆಯಲ್ಲಿ ವೈರಸ್ ಸೋಂಕು ಪತ್ತೆ: ರಾಜ್ಯದಲ್ಲಿ ಮತ್ತೆ ನಿಫಾ ಭೀತಿ ; 6 ಜಿಲ್ಲೆಗಳಲ್ಲಿ ಜಾಗ್ರತಾ ನಿರ್ದೇಶ

ತಿರುವನಂತಪುರ: ರಾಜ್ಯದಲ್ಲಿ ಮತ್ತೆ ನಿಫಾ ವೈರಸ್ ಪತ್ತೆಯಾಗಿದ್ದು, ಅದರಿಂದಾಗಿ ಪಾಲಕ್ಕಾಡ್, ಮಲ ಪ್ಪುರಂ, ಕಲ್ಲಿಕೋಟೆ, ಕಣ್ಣೂರು, ವಯನಾಡು ಮತ್ತು ತೃಶೂರು ಜಿಲ್ಲೆಗಳಲ್ಲಿ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ಯಿಂದ ಇರುವಂತೆ ಜಾಗ್ರತಾ ಮಾರ್ಗ ಸೂಚಿ ಹೊರಡಿಸಿದೆ. ನಿಫಾ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವರದಿ ಮಾಡುವಂತೆಯೂ ಎಲ್ಲಾ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನಿರ್ದೇಶ ನೀಡಿದೆ.

ಪಾಲಕ್ಕಾಡ್ ಜಿಲ್ಲೆಯ ಮಣ್ಣಾರ್‌ಕ್ಕಾಡ್ ಕೂಮಾರಂ ಪುತ್ತೂರು ಚಂಗಲೀರಿ ನಿವಾಸಿಯಾದ 57ರ ಮಹಿಳೆ ಜ್ವರದಿಂದ ಬಳಲುತ್ತಿದ್ದರು. ಅವರನ್ನು ವಾರದ ಹಿಂದೆ ಮಣ್ಣಾರ್‌ಕರಾಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ನಂತರ ಅವರನ್ನು ಅಲ್ಲಿಂದ ಮಲಪ್ಪುರಂ ಪೆರಿಂದಲ್ ಮಣ್ಣ್‌ನ ಖಾಸಗಿ ಆಸ್ಪತ್ರೆಯಲ್ಲಿ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ, ಫಲಕಾರಿಯಾಗದೆ ನಿನ್ನೆ ಅವರು ಸಾವನ್ನಪ್ಪಿದ್ದರು. ಅವರ ಸ್ಯಾಂಪಲನ್ನು ಪರೀಕ್ಷೆಗೊಳಪಡಿಸಿದಾಗ ಅವರಿಗೆ ನಿಫಾ ವೈರಸ್ ತಗಲಿರುವುದು ದೃಢಗೊಂಡಿದೆ. ಮೃತಪಟ್ಟ ಮಹಿಳೆಯನ್ನು ೪೦ರಷ್ಟು ಜನ ಭೇಟಿಯಾಗಿದ್ದರು. ಇದರಿಂದಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದ ಈ 40 ಮಂದಿ ಮತ್ತು ಅವರೊಂದಿಗೆ ಸಂಪರ್ಕ ಹೊಂದಿರುವವರೂ ತಕ್ಷಣ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಆರೋಗ್ಯ ಇಲಾಖೆ ತುರ್ತು ನಿರ್ದೇಶ ನೀಡಿದೆ. ಮಾತ್ರವಲ್ಲ ಅವರ ಬಗ್ಗೆಯೂ ಆರೋಗ್ಯ ಇಲಾಖೆ ಇನ್ನೊಂದೆಡೆ ತೀವ್ರ ನಿಗಾ ಇರಿಸಿದೆ. ಪಾಲಕ್ಕಾಡ್, ಮಲಪ್ಪುರಂ ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲಿ ಸುಮಾರು ೫೦೦ ಮಂದಿ ನಿಫಾ ಸಂಪರ್ಕ ಪಟ್ಟಿಯಲ್ಲಿದ್ದಾರೆ.

ಎರ್ನಾಕುಳಂನಲ್ಲಿ  ಇಬ್ಬರು ಈ ಪಟ್ಟಿಯಲ್ಲಿದ್ದಾರೆ. ಮಲಪ್ಪುರಂನಲ್ಲಿ ೧೦ ಮಂದಿ ರೋಗ ಲಕ್ಷಣಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವರು ಐಸಿಯುನಲ್ಲಿದ್ದಾರೆ. ಮಾದರಿ ಪರೀಕ್ಷೆಯಲ್ಲಿ ೬೨ ಮಂದಿಯ ಮಾದರಿಗಳು ನೆಗೆಟಿವ್ ಆಗಿದೆ.

ಕಲ್ಲಿಕೋಟೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಂದು ತಿಂಗಳ ಹಿಂದೆ ಚಿಕಿತ್ಸೆಯಲ್ಲಿದ್ದು ಮೃತಪಟ್ಟ 18 ವರ್ಷದ ಯುವಕನಿಗೂ ನಿಫಾ ಸೋಂಕು ದೃಢಪಟ್ಟಿತ್ತು. ನಿನ್ನೆ ಇದೇ ಸೋಂಕಿಗೆ ಮಹಿಳೆಯೋರ್ವೆ ಸಾವನ್ನಪ್ಪಿರುವುದರಿಂದಾಗಿ ರಾಜ್ಯದಲ್ಲಿ ನಿಫಾಗೆ ಬಲಿಯಾದವರ ಸಂಖ್ಯೆ ಈಗ ಎರಡಕ್ಕೇರಿದೆ. ಇದರಿಂದಾಗಿ ಈ ಆರು ಜಿಲ್ಲೆಗಳಲ್ಲಿ ಆರೋಗ್ಯ ಸಚಿವರು ಈಗ ಜಾಗೃತಾ ನಿರ್ದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page