ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸುತ್ತಿದ್ದ ಇಬ್ಬರು ಲಾರಿ ಢಿಕ್ಕಿ ಹೊಡೆದು ಮೃತ್ಯು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಸಿ ಕ್ಯಾಮರಾ ಸ್ಥಾಪಿಸುವ ಕಾಮಗಾರಿ ನಿರತರಾದ ಇಬ್ಬರು ಕಾರ್ಮಿಕರು ಲಾರಿ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಿನ್ನೆ ಸಂಜೆ ಉದ್ಯಾವರ ಮಾಡ ಸಮೀಪ ಸಂಭವಿಸಿದೆ. ಇನ್ನೋರ್ವ ಗಾಯಗೊಂಡಿದ್ದಾರೆ.

ಬಿಹಾರದ ದಾಮೋರ್‌ಪುರ್  ನಿವಾಸಿ ರಾಜ್ ಕುಮಾರ್ (27), ರಾಜಸ್ತಾನದ  ದಾಮೋದ್ ಅಮಿತ್ ಗಣಪಾಲ್ ಭಾ (25) ಎಂಬಿವರು  ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಉತ್ತರಪ್ರದೇಶ ನಿವಾಸಿ ಮಹೇಂದರ್ ಪ್ರತಾಪ್ ಸಿಂಗ್ (30) ಎಂಬವರು ಗಾಯಗೊಂಡಿದ್ದಾರೆ. ಇವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ನಿನ್ನೆ ಸಂಜೆ 4.30ರ ವೇಳ ಅಪಘಾತ ಸಂಭವಿಸಿದೆ.  ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪೆನಿಯ ನೌಕರರಾದ ಈ ಮೂವರು ತಮ್ಮ  ವ್ಯಾನನ್ನು ರಸ್ತೆ ಬದಿ ನಿಲ್ಲಿಸಿ  ಸಿಸಿ ಕ್ಯಾಮರಾ ಅಳವಡಿಸುತ್ತಿದ್ದರು. ಈ ವೇಳೆ ಕಾಸರಗೋಡು ಭಾಗದಿಂದ ಮಂಗಳೂರಿನತ್ತ ತೆರಳುತ್ತಿದ್ದ ಲಾರಿ ಅವರಿಗೆ ಢಿಕ್ಕಿ ಹೊಡೆದು ಬಳಿಕ ವ್ಯಾನ್‌ಗೆ ಬಡಿದು ನಿಂತಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಇಂದು ಸಂಬಂಧಿಕರು ತಲುಪಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಊರಿಗೆ ಕೊಂಡೊಯ್ಯಲಾಗುವುದೆಂದು ತಿಳಿಸಲಾಗಿದೆ. ಅಪಘಾತಕ್ಕೆ ಸಂಬಂಧಿಸಿ ಲಾರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದು ಚಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page