ಮಂಗಲ್ಪಾಡಿ ನಿವಾಸಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಪ್ರಕರಣ: ವಿಚಾರಣೆಗೆ ಹಾಜರಾಗದ ಕಯ್ಯಾರು ನಿವಾಸಿ ಸೆರೆ
ಕಾಸರಗೋಡು: ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗದ ಯುವಕನನ್ನು ಬಂಧಿಸಲಾಗಿದೆ. ಕಯ್ಯಾರಿನ ಅಬ್ದುಲ್ ರಹ್ಮಾನ್ ಎಂಬಾತನನ್ನು ಹೊಸದುರ್ಗ ಡಿವೈಎಸ್ಪಿ ಬಾಬು ಪೆರಿಂಙೋತ್ತ್ರ ನೇತೃತ್ವದಲ್ಲಿ ಉಪ್ಪಳದಿಂದ ಸೆರೆಹಿಡಿಯಲಾಗಿದೆ.
೨೦೨೨ ಮಾರ್ಚ್ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಪಿಲಿಕ್ಕೋಡ್ ತೊಟ್ಟಂ ಗೇಟ್ ಸಮೀಪ ಬಸ್ಸನ್ನು ಓವರ್ ಟೇಕ್ ಮಾಡುವ ಯತ್ನದ ಮಧ್ಯೆ ಅಬ್ದುಲ್ ರಹ್ಮಾನ್ ಚಲಾಯಿಸುತ್ತಿದ್ದ ಬೈಕ್ ಎದುರಿನಿಂದ ಬರುತ್ತಿದ್ದ ಲಾರಿಯನ್ನು ಕಂಡು ದಿಢೀರ್ ನಿಲ್ಲಿಸಿದಾಗ ಹಿಂಬದಿ ಸೀಟಿನಲ್ಲಿದ್ದ ಮಂಗಲ್ಪಾಡಿ ಪಚ್ಚಂಬಳ ನಿವಾಸಿ ಕಾಮಿಲ್ ಮುಬಶಿರ್ ಬೈಕ್ನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿತ್ತು. ಪ್ರಕರಣದಲ್ಲಿ ಚಂದೇರ ಪೊಲೀಸರು ತನಿಖೆ ಪೂರ್ತಿಗೊಳಿಸಿ ಆರೋಪ ಪಟ್ಟಿಯನ ನ್ಯಾಯಾಲಯಕ್ಕೆ ಸಲ್ಲಿಸಿದ್ದರೂ ಅಬ್ದುಲ್ ರಹ್ಮಾನ್ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊಸದುರ್ಗ ನ್ಯಾಯಾ ಲಯ ಈತನನ್ನು ತಲೆಮರೆಸಿಕೊಂಡ ಆರೋಪಿಯಾಗಿ ಘೋಷಿಸಿತ್ತು. ಅಪಘಾತ ಸಂಭವಿಸುವ ಸಮಯದಲ್ಲಿ ಈತನಿಗೆ ಲೈಸನ್ಸ್ ಇರಲಿಲ್ಲವೆಂದೂ ಪೊಲೀಸರು ತಿಳಿಸಿದ್ದಾರೆ. ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ಗಳಾದ ಜ್ಯೋತಿಷ್, ಅಜಿತ್, ಸುಧೀಶ್ ಎಂಬಿವರು ಆರೋಪಿಯನ್ನು ಬಂಧಿಸಿದ ತಂಡದಲ್ಲಿದ್ದರು.