ಕಾರಿನಲ್ಲಿ 4 ಕಿಲೋ ಗಾಂಜಾ ಸಾಗಿಸಿದ ಪ್ರಕರಣ: ದ್ವಿತೀಯ ಆರೋಪಿ ಪಟ್ಲ ನಿವಾಸಿಗೆ ಎರಡು ವರ್ಷ ಕಠಿಣ ಸಜೆ, 30 ಸಾವಿರ ರೂ. ದಂಡ
ಕಾಸರಗೋಡು: ಸ್ವಿಫ್ಟ್ ಕಾರಿನಲ್ಲಿ 4.830 ಕಿಲೋ ಗಾಂಜಾ ಸಾಗಿಸಿದ ಪ್ರಕರಣದಲ್ಲಿ ಎರಡನೇ ಆರೋಪಿಗೆ ನ್ಯಾಯಾಲಯ ಎರಡು ವರ್ಷ ಕಠಿಣ ಸಜೆ ಹಾಗೂ 30 ಸಾವಿರ ರೂ. ದಂಡ ವಿಧಿಸಿದೆ. ಪಟ್ಲ ನಿವಾಸಿ ಅಬ್ದುಲ್ ರೌಫ್ (39) ಎಂಬಾತನಿಗೆ ಕಾಸರಗೋಡು ಅಡಿಶನಲ್ ಡಿಸ್ಟ್ರಿಕ್ಟ್ ಆಂಡ್ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಕೆ. ಪ್ರಿಯಾ ಈ ಶಿಕ್ಷೆ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ. ಈ ಪ್ರಕರಣದಲ್ಲಿ ಒಂದನೇ ಆರೋಪಿಯನ್ನು ಈ ಹಿಂದೆ ಶಿಕ್ಷಿಸಲಾಗಿತ್ತು. 2015 ನವಂಬರ್ 29 ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಅಂದು ರಾತ್ರಿ 11.30ಕ್ಕೆ ಸೀತಾಂಗೋಳಿ ಬೇಳದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಆರೋಪಿಗಳನ್ನು ಸೆರೆಹಿಡಿಯಲಾಗಿತ್ತು. ಅಂದು ಬದಿಯಡ್ಕ ಎಸ್‌ಐ ಆಗಿದ್ದ ಎ. ಸಂತೋಷ್ ಕುಮಾರ್‌ರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಗಾಂಜಾ ವಶಪಡಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಅನಂತರ ಅದರ ತನಿಖೆಯನ್ನು ವಿದ್ಯಾನಗರ ಇನ್‌ಸ್ಪೆಕ್ಟರ್‌ಗಳಾದ ವಿ. ರಮೇಶ್ ನಡೆಸಿದ್ದು ಬಳಿಕ ಕೆ.ವಿ. ಪ್ರಮೋದ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ವಾಗಿ ಅಡಿಶನಲ್ ಸರ್ಕಾರಿ ಫ್ಲೀಡರ್ ಚಂದ್ರಮೋಹನ್ ಜಿ, ನ್ಯಾಯವಾದಿ ಚಿತ್ರಕಲಾ ಎಂಬಿವರು ಹಾಜರಾಗಿದ್ದರು.