ನೀರ್ಚಾಲು: ಏಣಿಯರ್ಪು ಲೈಫ್ ಹೌಸ್ ವಿಲ್ಲಾಕ್ಕಿರುವ ರಸ್ತೆ ಹಾಗೂ ಇಲ್ಲಿನ ಸ್ಥಳವನ್ನು ವ್ಯಕ್ತಿಯೋರ್ವ ವಶಪಡಿಸಲು ಯತ್ನಿಸುತ್ತಿದ್ದು, ಬಡವರಿಗೆ ಸರಕಾರ ನೀಡಿದ ಮನೆ ನಷ್ಟವಾಗುವ ಭೀತಿ ಇದೆ ಎಂದು ಆರೋಪಿಸಿ ವಿಲ್ಲಾದಲ್ಲಿ ವಾಸಿಸುವವರು ಕ್ರಿಯಾ ಸಮಿತಿ ರೂಪೀಕರಿಸಿ ಬೇಳ ವಿಲ್ಲೇಜ್ ಕಚೇರಿಗೆ ಮಾರ್ಚ್ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈ ತಿಂಗಳ 25ರಂದು ಬೆಳಿಗ್ಗೆ 10 ಗಂಟೆಗೆ ಮಧೂರು ರಸ್ತೆಯಿಂದ ಮಾರ್ಚ್ ಆರಂಭಿಸಲು ತೀರ್ಮಾನಿಸಲಾಗಿದೆ.
ಬಡ ಕುಟುಂಬಗಳಿಗಾಗಿ ಸರಕಾರ ನೀಡಿದ ಸ್ಥಳವನ್ನು ಖಚಿತಪಡಿಸಬೇಕೆಂದು ಆಗ್ರಹಿಸಿ ಮಾರ್ಚ್ ಹಮ್ಮಿಕೊಳ್ಳಲಾಗಿದೆ. 2014ರಲ್ಲಿ ಸರಕಾರ ಝೀರೋ ಲ್ಯಾಂಡ್ ಮೂಲಕ ನೀಡಿದ ಸ್ಥಳದಲ್ಲಿ ಲೈಫ್ ಮಿಷನ್ ವಸತಿ ಯೋಜನೆಯಂತೆ ಲಭಿಸಿದ 58 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ರಸ್ತೆ ಹಾಗೂ ನಾಲ್ಕು ಮನೆಗಳಿರುವ 50 ಸೆಂಟ್ಸ್ ಸ್ಥಳ ತನ್ನದಾಗಿದೆ ಎಂದು, ಅದನ್ನು ವಶಪಡಿಸಲು ವ್ಯಕ್ತಿಯೋರ್ವರು ಯತ್ನಿಸುತ್ತಿದ್ದು, ರೀ ಸರ್ವೆ ಹೆಸರಲ್ಲಿ ಕಂದಾಯ ಅಧಿಕಾರಿಗಳ ಜೊತೆ ಸೇರಿ ಸ್ಥಳ ಸ್ವಾಧೀನಪಡಿಸಲು ಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಮಾರ್ಚ್ ನಡೆಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ನೀಡಲು ಕ್ರಿಯಾ ಸಮಿತಿ ತೀರ್ಮಾನಿಸಿದೆ. ಕ್ರಿಯಾ ಸಮಿತಿ ರೂಪೀಕರಣ ಸಭೆಯಲ್ಲಿ ಅಬ್ದುಲ್ ಲತೀಫ್ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿ ಪ್ರಕಾಶ್ ಅಮ್ಮಣ್ಣಾಯ, ಸುಬೈರ್ ಬಾಪಲಿಪೊನ ಮಾತನಾಡಿದರು. ನಾಸಿರ್ ಸ್ವಾಗತಿಸಿದರು. ಅಬ್ದುಲ ಲತೀಫ್ ಅಧ್ಯಕ್ಷರಾಗಿರುವ, ಸೀನತ್ ಸಂಚಾಲಕರಾಗಿರುವ, ೫೮ ಕುಟುಂಬಗಳು ಒಳಗೊಂಡ ಕ್ರಿಯಾ ಸಮಿತಿಗೆ ರೂಪು ನೀಡಲಾಗಿದೆ.