ಪೈವಳಿಕೆ: ಪಂಚಾಯತ್‌ನ ೬ನೇ ವಾರ್ಡ್ ಕಲ್ಲಗದ್ದೆ- ಮೇಕೆಪದವು ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಸುಮಾರು ೧ ಕಿಲೋ ಮೀಟರ್ ರಸ್ತೆಯಲ್ಲಿ ಡಾಮರು ನಾಪತ್ತೆಯಾಗಿದ್ದು, ಹೊಂಡ ಸೃಷ್ಟಿಯಾಗಿದೆ. ವಾಹನ ಸಂಚಾರ ವೇಳೆ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸುಮಾರು ೨೦ರಷ್ಟು ಕುಟುಂಬಗಳು ವಾಸಿಸುತ್ತಿದ್ದು, ಹಲವು ವರ್ಷಗಳಿಂದ ಶೋಚನೀಯಗೊಂಡ ಈ ರಸ್ತೆಯನ್ನೇ ಇವರು ಬಳಸುತ್ತಿದ್ದಾರೆ. ದುರಸ್ತಿಗೊಳಿಸಲು ಪಂಚಾಯತ್‌ಗೆ ಈ ಹಿಂದೆ ಸ್ಥಳೀಯರು ಮನವಿ ಮಾಡಿದರೂ ಯಾವುದೇ ಕ್ರಮ ಉಂಟಾಗಲಿಲ್ಲವೆಂದು ಅವರು ತಿಳಿಸಿದ್ದಾರೆ.
ಮೇಕೆಪದವುನಲ್ಲಿ ಬೃಹತ್ ಸಂಸ್ಥೆಗಳು, ಗೆಸ್ಟ್ ಹೌಸ್, ಕೋಳಿ, ಆಡು ಮೊದಲಾದ ಫಾರ್ಮ್‌ಗಳು ನಿರ್ಮಾಣಗೊಂಡಿದ್ದು, ಇಲ್ಲಿಗೆ ವಿವಿಧ ಸಾಮಗ್ರಿಗಳನ್ನು ಕೊಂಡೊಯ್ಯಲು ದೊಡ್ಡ ಲಾರಿಗಳು ಸಂಚರಿಸಿರುವುದೇ ರಸ್ತೆ ಇಷ್ಟು ಶೋಚನೀಯಾವಸ್ಥೆಗೆ ತಲುಪಲು ಕಾರಣವೆಂದು ಸ್ಥಳೀಯರು ದೂರಿದ್ದಾರೆ. ಇದೇ ವೇಳೆ ಈ ಪರಿಸರದಲ್ಲಿ ಮಳೆನೀರು ಹರಿದು ಪರಿಸರದ ಹಿತ್ತಿಲಿಗೆ ಸೇರುತ್ತಿರುವುದಾಗಿಯೂ ದೂರಲಾಗಿದೆ. ಪಂಚಾಯತ್ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಊರವರು ಆಗ್ರಹಿಸಿದ್ದಾರೆ.