ಪಂಚಾಯತ್ ಚುನಾವಣೆ: ಒಂದೂವರೆ ವರ್ಷದಿಂದ ಮುಚ್ಚಿದ ಕಂಚಿಕಟ್ಟೆ- ಕೊಡ್ಯಮ್ಮೆ ಸೇತುವೆ ನಿರ್ಮಾಣಕ್ಕೆ ಮತ್ತೆ ಹೆಚ್ಚಿದ ಬೇಡಿಕೆ
ಕುಂಬಳೆ: ಜೀರ್ಣಗೊಂಡ ಹಿನ್ನೆಲೆಯಲ್ಲಿ ಸುರಕ್ಷಿತವಲ್ಲವೆಂದು ಒಂದೂವರೆ ವರ್ಷದ ಹಿಂದೆ ಮುಚ್ಚಿದ ಕುಂಬಳೆ ಕೊಡ್ಯಮ್ಮೆ- ಕಂಚಿಕಟ್ಟೆ ವಿಸಿಬಿ ಕಂ ಬ್ರಿಡ್ಜ್ ಸಂಪೂರ್ಣ ನಾಶದತ್ತ ಸಾಗುತ್ತಿದೆ. ಸ್ಥಳೀಯರು ಮನವಿ ನೀಡಿದರೂ ಸೇತುವೆ ನಿರ್ಮಾಣಕ್ಕೆ ಶಾಸಕರ ನೇತೃತ್ವದಲ್ಲಿ ಕ್ರಿಯಾ ಸಮಿತಿ ಪದಾಧಿಕಾರಿಗಳು, ತ್ರಿಸ್ತರ ಪಂಚಾಯತ್ ಪದಾಧಿಕಾರಿಗಳು ಈ ವರ್ಷವೇ ನಬಾರ್ಡ್ ಯೋಜನೆಯಲ್ಲಿ ಸೇರಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬೇಡಿಕೆ ಮುಂದಿಟ್ಟು ಶಾಸಕರ ನೇತೃತ್ವದಲ್ಲಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಜಿಲ್ಲೆಯ ಜನಪ್ರತಿನಿಧಿಗಳು ಸೇರಿದ ತಂಡವೊಂದು ಸಚಿವ ಕೆ.ಎನ್. ಬಾಲಗೋಪಾಲ್, ಸಚಿವ ರೋಷಿ ಅಗಸ್ಟಿನ್ ಎಂಬಿವರನ್ನು ಭೇಟಿಯಾಗಿ ಮತ್ತೊಮ್ಮೆ ಒತ್ತಾಯಿಸಿದೆ.
ಸೇತುವೆಯನ್ನು ಮುಚ್ಚಿ ಒಂದೂವರೆ ವರ್ಷವಾಗಿದ್ದು, ಈ ಪ್ರದೇಶದ ಜನರು ಎದುರಿಸುವ ಸಂಚಾರ ಸಮಸ್ಯೆ ಬಗ್ಗೆ ಸಚಿವರಲ್ಲಿ ತಂಡ ವಿವರಿಸಿದೆ. ತಂಡದಲ್ಲಿ ಶಾಸಕರಾದ ಎಕೆಎಂ ಅಶ್ರಫ್, ರಾಜಗೋಪಾಲ್, ಸಿ.ಎಚ್. ಕುಂಞಂಬು, ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ, ಉಪಾಧ್ಯಕ್ಷ ನಾಸರ್, ಸದಸ್ಯ ಯೂಸಫ್ ಉಳುವಾರು, ಕ್ರಿಯಾ ಸಮಿತಿ ಸದಸ್ಯರಾದ ಮಂಜುನಾಥ ಆಳ್ವ, ಬಿ.ಎ. ಸುಬೈರ್, ಯೋಗೀಶ ಕೆ, ಅಶ್ರಫ್ ಕೊಡ್ಯಮ್ಮೆ ಉಪಸ್ಥಿತರಿದ್ದರು. ಸೇತುವೆ ನಿರ್ಮಾಣಕ್ಕೆ 27 ಕೋಟಿ ರೂ. ಅಂದಾಜು ವೆಚ್ಚ ಲೆಕ್ಕ ಹಾಕಲಾಗಿದೆ. ತ್ರಿಸ್ತರ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಈ ವಿಷಯವನ್ನು ಎತ್ತಿ ಹಿಡಿದು ಹೋರಾಟ ನಡೆಸಲು ಸ್ಥಳೀಯರು ಯತ್ನ ನಡೆಸುತ್ತಿದ್ದ ಮಧ್ಯೆ ಶಾಸಕರ ನೇತೃತ್ವದಲ್ಲಿ ಸಚಿವರನ್ನು ಕಂಡು ಮನವಿ ನೀಡಲಾಗಿದೆ.