ಹೆಚ್ಚುತ್ತಿರುವ ಕಡಲ್ಕೊರೆತ: ತೀರ ಪ್ರದೇಶದ ಬಹುತೇಕ ಮನೆಗಳು ಸಮುದ್ರಪಾಲು ಭೀತಿಯಲ್ಲಿ
ಉಪ್ಪಳ: ತೀರ ನಿವಾಸಿಗಳಲ್ಲಿ ಕಡಲ್ಕೊರೆತ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಪಾಯ ಕಣ್ಮುಂದೆ ಕಾಣುವಂತೆ ಬದುಕುತ್ತಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಂಜೇಶ್ವರ, ಮಂಗಲ್ಪಾಡಿ ಪಂಚಾಯತ್ನ ಸಮುದ್ರ ತೀರ ಪ್ರದೇಶದ ಜನರು ಆತಂಕದಲ್ಲಿದ್ದಾರೆ. ಇಲ್ಲಿನ ವಿವಿಧ ಕಡೆಗಳ ರಸ್ತೆ, ಹಲವಾರು ಮರಗಳು ಸಮುದ್ರಪಾಲಾಗಿದ್ದು, ಕೆಲವು ಮನೆಗಳು ಅಪಾಯದ ಅಂಚಿನಲ್ಲಿದೆ. ಪೆರಿಂಗಡಿ, ಐಲ ಕುದುಕುಳು, ಬಂಗ್ಲ, ಹನುಮಾನ್ ನಗರದಲ್ಲಿ ರಸ್ತೆ ಹಾಗೂ ಹಲವಾರು ಗಾಳಿ, ತೆಂಗಿನ ಮರಗಳು ಸಮುದ್ರಪಾಲಾಗಿದೆ. ಇಲ್ಲಿ ಹಲವು ಮನೆಗಳು ನೀರುಪಾಲಾಗುವ ಭೀತಿಯಲ್ಲಿದೆ. ಶಾರದಾನಗರ, ಮುಸೋಡಿ, ಕಣ್ವತೀರ್ಥ ಮೊದಲಾದ ಪ್ರದೇಶಗಳಲ್ಲಿಯೂ ಕಡಲ್ಕೊರೆತ ಭೀತಿ ಹೆಚ್ಚುತ್ತಿದೆ. ವ್ಯವಸ್ಥಿತ ರೀತಿಯಲ್ಲಿ ತಡೆಗೋಡೆ ನಿರ್ಮಿಸದಿರುವುದೇ ಇಲ್ಲಿ ಕಡಲ್ಕೊರೆತಕ್ಕೆ ಕಾರಣವೆಂದು ಸ್ಥಳೀಯರು ತಿಳಿಸಿದ್ದು, ತಡೆಗೋಡೆ ಶೀಘ್ರ ನಿರ್ಮಿಸಲು ಒತ್ತಾಯಿಸಿದ್ದಾರೆ.