ಟ್ರೋಲಿಂಗ್ ನಿಷೇಧ ಇಂದು ಕೊನೆ: ಮಾರುಕಟ್ಟೆಗಳಲ್ಲಿ ಹೆಚ್ಚಿದ ಮೀನಿನ ಲಭ್ಯತೆ
ಕಾಸರಗೋಡು: ಬಿರುಸಿನ ಮಳೆ, ಕಡಲಬ್ಬರ, ಟ್ರೋಲಿಂಗ್ ನಿಷೇಧದಿಂದಾಗಿ ಮೀನುಗಳು ಶುಷ್ಕವಾಗಿದ್ದ ಮಾರುಕಟ್ಟೆಗಳಲ್ಲಿ ಈಗ ಯಥೇಚ್ಚ ಮೀನುಗಳು ಲಭ್ಯವಾಗುತ್ತಿರುವುದು ಮೀನುಪ್ರಿಯರಿಗೆ ಆಶ್ವಾಸಕರವಾಗಿದೆ. ಇಂದು ಟ್ರೋಲಿಂಗ್ ನಿಷೇಧ ಕೊನೆಗೊಳ್ಳುವುದರೊಂದಿಗೆ ಮೀನಿನ ಕ್ಷಾಮ ಮಾರುಕಟ್ಟೆಯಲ್ಲಿ ತಲೆದೋರದೆಂಬ ನಿರೀಕ್ಷೆ ಮೀನು ಮಾರಾಟಗಾರರು, ಕಾರ್ಮಿಕರು ಇರಿಸಿಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮಾರುಕಟ್ಟೆಗಳಲ್ಲಿ ಸಿಗಡಿ ಮೀನು ಭಾರೀ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಮಧ್ಯಮ ಗಾತ್ರದ ಸಿಗಡಿ ಮೀನಿಗೆ ಕಿಲೋಗೆ 200 ರೂ. ದರದಲ್ಲಿ ಮಾರಾಟವಾಗುತ್ತಿತ್ತು. ಗ್ರಾಮ ಪ್ರದೇಶಗಳಲ್ಲಿ ಇದು 220ರಿಂದ 250ರ ವರೆಗೆ ಏರಿತ್ತು. ಆದರೆ ದೊಡ್ಡ ಸಿಗಡಿಗೆ 400ರಿಂದ 500 ರೂ.ವರೆಗೆ ಬೆಲೆ ಇದೆ. ಉತ್ತಮ ರೀತಿಯ ಸಿಗಡಿ ಮೀನು ಹಾಗೂ ಬೆರಕೆ ಮೀನುಗಳು ಮಾರುಕಟ್ಟೆಗಳಿಗೆ ತಲುಪಿರುವುದರೊಂದಿಗೆ ಭೂತಾಯಿ, ಬಂಗುಡೆ ಮೊದಲಾದ ಮೀನುಗಳಿಗೆ ಬೇಡಿಕೆ ಕುಸಿದಿದೆ. ಫ್ರೆಶ್ ಆಗಿ ಲಭಿಸುವ ಮೀನುಗಳಲ್ಲಿ ಜನರಿಗೆ ಆಸಕ್ತಿ ಹೆಚ್ಚಾಗಿದೆ.
ಕಡಲಬ್ಬರ ಜಿಲ್ಲೆಯ ಹಲವು ಭಾಗಗಳಲ್ಲಿ ಈಗಲೂ ಮುಂದುವರಿಯುತ್ತಿದ್ದರೂ ಕೆಲವು ಕಡೆಗಳಲ್ಲಿ ಸಮುದ್ರಕ್ಕೆ ತೆರಳುವ ದೋಣಿಗಳಿಂದ ಈಗ ಮೀನುಗಳು ಮಾರುಕಟ್ಟೆಗೆ ತಲುಪುತ್ತಿರುವುದು. ಮಂಗಳೂರು, ಮಂಜೇಶ್ವರ ಮೀನುಗಾರಿಕಾ ಬಂದರುಗಳಿಂದ ಈ ರೀತಿಯಲ್ಲಿ ದೋಣಿಗಳಲ್ಲಿ ಹಿಡಿಯುವ ಮೀನುಗಳನ್ನು ಮಾರುಕಟ್ಟೆಗೆ ತಲುಪಿಸಲಾಗುತ್ತಿದೆ. ಆದರೆ ಹವಾಮಾನದ ಮುನ್ನೆಚ್ಚರಿಕೆ ಈಗಲೂ ಮುಂದುವರಿಯುತ್ತಿದೆ.