ಮದುವೆ ಭರವಸೆ ನೀಡಿ ಯುವತಿಗೆ ಲೈಂಗಿಕ ಕಿರುಕುಳ: ಯುವಕ ಸೆರೆ
ಕಾಸರಗೋಡು: ಮದುವೆಯಾಗುವು ದಾಗಿ ನಂಬಿಸಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗದ ಖಾಸಗಿ ನೇತ್ರ ಚಿಕಿತ್ಸಾಲಯವೊಂದರ ಸಿಬ್ಬಂದಿ ಕಣ್ಣೂರು ನಿವಾಸಿ ನಿಜಾರ್ (30) ಬಂಧಿತ ಆರೋಪಿ. ದೂರುದಾತೆ ಯುವತಿ ತನ್ನ ಸಹೋದರನೊಂದಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದಿದ್ದ ವೇಳೆ ಅಲ್ಲಿ ಆಕೆಯನ್ನು ಆರೋಪಿ ಪರಿಚಯಗೊಂಡಿದ್ದನು. ನಂತರ ಅವರಿಬ್ಬರು ಪರಸ್ಪರ ಪ್ರೀತಿಸತೊಡಗಿದರು. ಈ ಮಧ್ಯೆ ಮದುವೆಯಾಗುವುದಾಗಿ ಆರೋಪಿ ಯುವತಿಯನ್ನು ವಿವಿಧೆಡೆಗಳಿಗೆ ಕೊಂಡೊಯ್ದು ಲೈಂಗಿಕ ಕಿರುಕುಳ ನೀಡಿದನೆಂದು ಆರೋಪಿಸಲಾಗಿದೆ.
ಆ ಬಳಿಕ ಆರೋಪಿ ಯುವತಿ ಯೊಂದಿಗಿನ ಪ್ರೀತಿ ಸಂಬಂಧದಿಂದ ಹಾಗೂ ಮದುವೆ ಭರವಸೆಯಿಂದ ಹಿಂಜರಿದನೆನ್ನಲಾಗಿದೆ. ಆ ಬಗ್ಗೆ ಯುವತಿ ನಂತರ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದಳು. ತಾನು ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದಳೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಆಕೆ ತಿಳಿಸಿದ್ದಳು. ಅದರಂತೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಕೊಂಡ ಬಳಿಕ ಅದನ್ನು ಸ್ಪೆಷಲ್ ಮೊಬೈಲ್ ಸ್ಕ್ವಾಡ್‌ಗೆ ಹಸ್ತಾಂತರಿಸಿದ್ದರು. ಅದರಂತೆ ಸ್ಪೆಷಲ್ ಮೊಬೈಲ್ ಸ್ಕ್ವಾಡ್ ನಡೆಸಿದ ತನಿಖೆಯಲ್ಲಿ ಆ ಯುವತಿ ಮೀಸಲಾತಿ ವಿಭಾಗಕ್ಕೆ ಸೇರಿದವಳ ಲ್ಲವೆಂದು ಪತ್ತೆಹಚ್ಚಿದ್ದರು. ಅದರಿಂದಾಗಿ ಆ ಪ್ರಕರಣವನ್ನು ಹೊಸದುರ್ಗ ಪೊಲೀಸರಿಗೇ ಹಿಂತಿರುಗಿಸಿದ್ದರು. ಬಳಿಕ ಹೊಸದುರ್ಗ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದರು.