ಮಸೀದಿ ಆವರಣದಲ್ಲಿದ್ದ ಕಾರು ನಿಗೂಢ ಸ್ಥಿತಿಯಲ್ಲಿ ಬೆಂಕಿಗಾಹುತಿ
ಬದಿಯಡ್ಕ: ಮಸೀದಿ ಆವರಣ ದೊಳಗೆ ನಿಲ್ಲಿಸಿದ್ದ ಕಾರು ನಿಗೂಢ ರೀತಿಯಲ್ಲಿ ಬೆಂಕಿಗಾಹುತಿಯಾದ ಘಟನೆ ಪೈಕದಲ್ಲಿ ನಡೆದಿದೆ. ಪೈಕ ಜುಮಾ ಮಸೀದಿಯ ಉಸ್ತಾದ್ ರಾಸಬಾಖಫಿ ಹೈದಮಿ ಎಂಬವರ ಕಾರು ಉರಿದು ನಾಶಗೊಂಡಿದೆ. ಕಾರಿನಲ್ಲಿದ್ದ ಪಾಸ್ಪೋರ್ಟ್ ಸಹಿತ ಬೆಲೆಬಾಳುವ ದಾಖಲೆಪತ್ರಗಳು ಕೂಡಾ ಉರಿದು ನಾಶಗೊಂಡಿರುವುದಾಗಿ ತಿಳಿಸಲಾಗಿದೆ. ಇಂದು ಮುಂಜಾನೆ 2.30ರ ವೇಳೆ ಘಟನೆ ನಡೆದಿದೆ. ಕಾರಿಗೆ ಬೆಂಕಿ ತಗಲಿರುವುದನ್ನು ಕಂಡ ಸ್ಥಳೀಯರು ಕಾಸರಗೋಡು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್, ವಿ.ಎಂ. ಸತೀಶನ್ ಎಂಬವರ ನೇತೃತ್ವದಲ್ಲಿ ಎರಡು ಘಟಕ ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ದೀರ್ಘ ಕಾಲದ ಪ್ರಯತ್ನದಿಂದ ಬೆಂಕಿಯನ್ನು ನಂದಿಸಿದೆ. ಇದರಿಂದ ಕಾರಿನ ಸಮೀಪ ನಿಲ್ಲಿಸಿದ್ದ ಮಸೀದಿಯ ಮಾಲಕತ್ವದ ಶಾಲಾ ಬಸ್ ಹಾಗೂ ಬೈಕ್ಗೆ ಬೆಂಕಿ ತಗಲುವುದನ್ನು ತಪ್ಪಿಸಲಾಯಿತು. ಎಸ್. ಅರುಣ್ ಕುಮಾರ್, ಎಂ. ರಮೇಶ್, ಸಿ.ವಿ. ಶಬಿಲ್ ಕುಮಾರ್, ಜಿತ್ತು ತೋಮಸ್, ಪಿ.ಎಸ್. ಮುಹಮ್ಮದ್, ಸಿರಾಜುದ್ದೀನ್, ಅತುಲ್ ರವಿ, ಅರುಣ ಪಿ ನಾಯರ್, ಒ.ಕೆ. ಅನುಶ್ರೀ, ಹೋಂಗಾರ್ಡ್ಗಳಾದ ಎಸ್. ಅಜೇಶ್, ಎಂ.ಸಿ. ರಾಕೇಶ್ ಎಂಬಿವರು ಅಗ್ನಿಶಾಮಕದಳದಲ್ಲಿದ್ದರು.
ರಾಸ ಬಾಖಫಿಯವರ ಸಂಬಂಧಿಕನಾದ ಮಂಗಲ್ಪಾಡಿ ನಿವಾಸಿ ಅಬ್ದುಲ್ಲರ ಮಾಲಕತ್ವದ ಕಾರು ಬೆಂಕಿಗಾಹುತಿಯಾಗಿದೆ. ಕಾರು ಬೆಂಕಿಗಾಹುತಿಯಾದುದರ ಹಿಂದೆ ನಿಗೂಢತೆ ಇದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.