ಹೊಯ್ಗೆ ಮಾಫಿಯಾಗಳೊಂದಿಗೆ ನಂಟು: ಕುಂಬಳೆ ಠಾಣೆಯ ಆರು ಪೊಲೀಸರ ಅಮಾನತು
ಕುಂಬಳೆ: ಅನಧಿಕೃತವಾಗಿ ಹೊಳೆಗಳಿಂದ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವುದನ್ನು ತಡೆಯಬೇಕಾದ ಪೊಲೀಸರೇ ಹೊಯ್ಗೆ ಮಾಫಿಯಾಗಳೊಂದಿಗೆ ಸಂಬಂಧವಿರಿಸಿಕೊಂಡು ಹೊಯ್ಗೆ, ಮಣ್ಣು ಸಾಗಾಟ ದಂಧೆಗೆ ನೆರವಾದ ವಿಷಯ ಕೊನೆಗೂ ಬೆಳಕಿಗೆ ಬಂದಿದೆ. ಈ ಸಂಬಂಧ ಕುಂಬಳೆ ಪೊಲೀಸ್ ಠಾಣೆಯ ಚಾಲಕ ಸಹಿತ ಆರು ಮಂದಿ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖಾ ವಿಧೇ ಯವಾಗಿ ಅಮಾನತುಗೊಳಿಸಿದ್ದಾರೆ. ಪಿ.ಎಂ. ಅಬ್ದುಲ್ ಸಲಾಂ, ವಿನೋದ್ ಕುಮಾರ್, ಲಿನೀಶ್, ಎಂ.ಕೆ. ಅನೂಪ್, ಮನು, ಚಾಲಕ ಕೃಷ್ಣ ಪ್ರಸಾದ್ ಎಂಬಿವರನ್ನು ಅಮಾನತುಗೊಳಿಸಲಾಗಿದ. ಅನಧಿಕೃತವಾಗಿ ಹೊಯ್ಗೆ, ಮಣ್ಣು ಸಾಗಾಟ ದಂಧೆ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಗಳ ಕಾರ್ಯಾ ಚರಣೆ ನಡೆಸುವ ಮಾಹಿತಿಯನ್ನು ಮಾಫಿಯಾಗಳಿಗೆ ನೀಡಿ ಅವರಿಗೆ ನೆರವಾದ ಆರೋಪದಂತೆ ಈ ಆರು ಮಂದಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಹೊಯ್ಗೆ ಸಾಗಾಟ ವಿರುದ್ಧ ಎಸ್‌ಐ ಶ್ರೀಜೇಶ್ ನೇತೃತ್ವದಲ್ಲಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಹೊಯ್ಗೆ ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಲಾಗಿತ್ತು. ಬಳಿಕ ಅದರ ಚಾಲಕನ ಮೊಬೈಲ್ ಫೋನ್ ಪರಿಶೀಲಿಸಿದಾಗ ಆತ ಪೊಲೀಸರೊಂದಿಗೆ ಹೊಂದಿರುವ ನಂಟಿನ ಕುರಿತು ತಿಳಿದುಬಂದಿದೆ. ಈ ಬಗ್ಗೆ ಎಸ್‌ಐ ಶ್ರೀಜೇಶ್ ಡಿವೈಎಸ್ಪಿಗೆ ವರದಿ ಸಲ್ಲಿಸಿದ್ದರು. ಡಿವೈಎಸ್ಪಿ ತನಿಖೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸಿದ್ದು, ಇದರಂತೆ ಆರೋಪವಿಧೇಯರಾದ 6 ಮಂದಿ ಪೊಲೀಸರನ್ನು ಅಮಾನತುಗೊಳಿ ಸಲಾಗಿದೆ.