ಎರಡೆಡೆ ಅಬಕಾರಿ ದಾಳಿ: ಕರ್ನಾಟಕ ಮದ್ಯ ಪತ್ತೆ, ಸ್ಕೂಟರ್ ಸಹಿತ ಓರ್ವ ಸೆರೆ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಜಿಲ್ಲೆಯ ಎರಡೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆಯಲ್ಲದೆ ಆತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.
ನಗರದ ಕರಂದಕ್ಕಾಡ್ ಅಗ್ನಿಶಾಮಕದಳದ ಹಿಂದುಗಡೆಯ ಜನವಾಸವಿಲ್ಲದ ಹಿತ್ತಿಲಿಗೆ ಹೋಗುವ ರಸ್ತೆ ಬದಿಯ ಪೊದೆಯಲ್ಲಿ ಬಚ್ಚಿಡಲಾಗಿದ್ದ 15.66 ಲೀಟರ್ 180 ಎಂಎಲ್‌ನ 87 ಟೆಟ್ರಾ ಪ್ಯಾಕೆಟ್) ಕರ್ನಾಟಕ ನಿರ್ಮಿತ ಮದ್ಯವನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್‌ನ ಗ್ರೇಡ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಸಿ.ಕೆ.ವಿ. ಸುರೇಶ್‌ರ ನೇತೃತ್ವದಲ್ಲಿ ಗ್ರೇಡ್ ಪಿ.ಒ.ಗಳಾದ ಅಜೀಶ್ ಸಿ, ಪ್ರಜಿತ್ ಕೆ.ಆರ್, ಸಿವಿಲ್ ಎಕ್ಸೈಸ್ ಅಫೀಸರ್‌ಗಳಾದ ಮಂಜುನಾಥನ್ ಮತ್ತು ಶಿಜಿತ್ ಎ.ವಿ. ಎಂಬವರನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ರೀತಿ ಇನ್ನೊಂದೆಡೆ ಬದಿಯಡ್ಕ ಎಕ್ಸೈಸ್ ರೇಂಜ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ಜಿಷ್ಣು ಪಿ.ಆರ್.ರ ನೇತೃತ್ವದ ಅಬಕಾರಿ ತಂಡ ಅಡೂರಿನಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 12.96 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ಬಟ್ಟತ್ತೂರು ನಿವಾಸಿ ಮಂಜುನಾಥ ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಆತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸದಾನಂದನ್ ಪಿ, ವಿನೋದ್ ಬಿ. ಮತ್ತು ಚಾಲಕ ಸಾಗರ್ ಎಂಬಿವರು ಒಳಗೊಂಡಿದ್ದರು.