ಮೃತದೇಹಗಳನ್ನು ಹೂತು ಹಾಕಿದ ಬಗ್ಗೆ ಹೇಳಿಕೆ: ಧರ್ಮಸ್ಥಳದಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ; ರಾಡಾರ್ ಬಳಸಿ ಶೋಧ ನಡೆಸುವಂತೆಯೂ ಒತ್ತಾಯ
ಬೆಳ್ತಂಗಡಿ: ಧರ್ಮಸ್ಥಳ ಪರಿಸರದಲ್ಲಿ ಹಲವು ಮಹಿಳೆಯರ ಅಸಹಜ ಸಾವು ಸಂಭವಿಸಿದೆ ಯೆಂದೂ, ಅವರ ಮೃತದೇಹಗಳನ್ನು ತಾನು ಹೂತುಹಾಕಿದ್ದೇನೆಂದು ಆರೋಪಿಸಿ ವ್ಯಕ್ತಿಯೋರ್ವ ನೀಡಿದ ದೂರಿನಂತೆ ವಿಶೇಷ ತನಿಖಾ ತಂಡ ತನಿಖೆ ಮುಂದುವರಿಸಿದೆ. ಕಳೆದೊಂ ದು ವಾರದಿಂದ ಧರ್ಮಸ್ಥಳ ಪರಿಸರದ ಕಾಡು ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಮೃತದೇಹ ಹೂತು ಹಾಕಲಾಗಿದೆಯೆಂದು ದೂರುಗಾರ ಸೂಚಿಸಿದ 13 ಸ್ಥಳಗಳ ಪೈಕಿ ಆರನೇ ಸ್ಥಳದಲ್ಲಿ ಮಾತ್ರ ಕಳೇಬರವೊಂದು ಲಭಿಸಿದೆ. ಉಳಿದೆಡೆ ಯಾವುದೇ ಮೃತದೇಹದ ಕುರುಹು ಲಭಿಸಿಲ್ಲವೆಂದು ತನಿಖಾ ತಂಡ ತಿಳಿಸಿದೆ. ನಿನ್ನೆ ಬೆಳಿಗ್ಗಿನಿಂದ ಮಧ್ಯಾಹ್ನವರೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ದೂರುಗಾರ ಸೂಚಿಸಿದ 12ನೇ ಸ್ಥಳದಲ್ಲಿ ನಿನ್ನೆ ಶೋಧ ನಡೆಸಲಾಗಿದ್ದು, ಆದರೆ ಮೃತದೇಹದ ಯಾವುದೇ ಕುರುಹು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಇಂದು ಕೂಡಾ ಶೋಧ ನಡೆಸಲಾಗುತ್ತಿದೆ.
ದೂರುಗಾರ ನ್ಯಾಯಾಲಯದಲ್ಲಿ ತಲೆಬುರುಡೆಯೊಂದನ್ನು ಹಾಜರುಪಡಿ ಸಿದ್ದರು. ಅದನ್ನು ಸಂಗ್ರಹಿಸಿದ ಸ್ಥಳವನ್ನು ಇದುವರೆಗೂ ಆತ ತೋರಿಸಿಲ್ಲವೆಂದು ಎಸ್‌ಐಟಿ ತಿಳಿಸುತ್ತಿದೆ.
ಇದೇ ವೇಳೆ ಮೃತದೇಹಗಳನ್ನು ಹೂತು ಹಾಕಲಾಗಿದೆಯೆಂದು ತಿಳಿಸಲಾದ ಸ್ಥಳಗಳಲ್ಲಿ ರಾಡಾರ್ ತಾಂತ್ರಿಕ ವ್ಯವಸ್ಥೆಗಳನ್ನು ಬಳಸಿ ಶೋಧ ನಡೆಸಬೇಕೆಂದು ದೂರುದಾತೆಯೊಬ್ಬರ ವಕೀಲರು ತನಿಖಾಧಿಕಾರಿಗಳಲ್ಲಿ ಆಗ್ರಹ ಪಟ್ಟಿರುವುದಾಗಿಯೂ ಹೇಳಲಾಗುತ್ತಿದೆ.
2003ರಲ್ಲಿ ಧರ್ಮಸ್ಥಳದಲ್ಲಿ ನಿಗೂಢವಾಗಿ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಎಂಬವರ ತಾಯಿ ಸುಜಾತಾ ಭಟ್‌ರ ನ್ಯಾಯವಾದಿ ಮಂಜುನಾಥ ಎಂಬವರು ಈ ಬಗ್ಗೆ ಬೇಡಿಕೆ ಮುಂದಿರಿಸಿದ್ದಾರೆ. ಮಗಳು ನಾಪತ್ತೆಯಾದುದರಿಂದ ಭಾರೀ ದುಃಖಿತರಾದ ಸುಜಾತಾ ಭಟ್ 2014ರಲ್ಲಿ ಧರ್ಮಸ್ಥಳದಿಂದ ವಾಸ ಬೇರೆಡೆಗೆ ಬದಲಾಯಿಸಿದ್ದರು. ಅನಂತರ 11 ವರ್ಷಗಳ ಮಧ್ಯೆ ಧರ್ಮಸ್ಥಳ ಅರಣ್ಯ ಪ್ರದೇಶದಲ್ಲಿ ಹಲವು ಬದಲಾವಣೆ ಉಂಟಾಗಿದೆ. ಆದ್ದರಿಂದ ಮೃತದೇಹದ ಅಸ್ಥಿಪಂಜರ ಪತ್ತೆಹಚ್ಚಲು ನೂತನ ರಾಡಾರ್ ತಾಂತ್ರಿಕ ವ್ಯವಸ್ಥೆಯನ್ನು ಬಳಸಬೇಕೆಂಬುದಾಗಿ ಸುಜಾತಾ ಭಟ್‌ರ ವಕೀಲರು ವಿಶೇಷ ತನಿಖಾ ತಂಡದೊಂದಿಗೆ ಆಗ್ರಹಪಟ್ಟಿದ್ದಾರೆ.
ಧರ್ಮಸ್ಥಳ ಪರಿಸರದಲ್ಲಿ ಹಲವು ಮಹಿಳೆಯರ ಅಸಹಜ ಸಾವು ಸಂಭವಿಸಿದೆಯೆಂದೂ ಅವರ ಮೃತದೇಹಗಳನ್ನು ತಾನು ಹೂತು ಹಾಕಿದ್ದೇನೆಂದು ವ್ಯಕ್ತಿಯೋರ್ವ ಬಹಿರಂಗಪಡಿಸಿರುವುದು ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ.