ಕುಂಬಳೆಯ ಯುನಾನಿ ಆರೋಗ್ಯ ಕೇಂದ್ರವನ್ನು ಆಶ್ರಯಿಸುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ : ಈ ವರ್ಷ 32 ಲಕ್ಷ ರೂಪಾಯಿಗಳ ಔಷಧಿ ಖರೀದಿ
ಕುಂಬಳೆ: ಯುನಾನಿ ಚಿಕಿತ್ಸೆ ಫಲಪ್ರದವೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿರುವ ರಾಜ್ಯದ ಏಕೈಕ ಸರಕಾರಿ ಯುನಾನಿ ಆರೋಗ್ಯ ಕೇಂದ್ರಕ್ಕೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಲುಪುತ್ತಿದ್ದಾರೆ. ಇದರಿಂದ ಈ ವರ್ಷ ಆರಂಭದಲ್ಲಿ ಔಷಧಿ ಕ್ಷಾಮ ಎದುರಿಸಬೇಕಾಗಿ ಬಂದಿತ್ತು. ಡಿಸ್ಪೆನ್ಸರಿಯ ಆಡಳಿತ ಹೊಣೆಗಾರಿಕೆಯುಳ್ಳ ಕುಂಬಳೆ ಪಂಚಾಯತ್ ಔಷಧಿ ಖರೀದಿಸಲು 2 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ನೀಡಿದೆ. 2025-26ನೇ ಹಣಕಾಸು ವರ್ಷದಲ್ಲಿ 32 ಲಕ್ಷ ರೂಪಾಯಿಗಳ ಔಷಧಿ ರೋಗಿಗಳಿಗೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಔಷಧಿ ಕ್ಷಾಮ ಕಂಡುಬಂದ ಬಗ್ಗೆ ಮೆಡಿಕಲ್ ಆಫೀಸರ್ ಡಾ| ಶಕೀರ್ ಅಲಿ ಕುಂಬಳೆ ಗ್ರಾಮ ಪಂಚಾಯತ್ ಆಡಳಿತ ಸಮಿತಿ ಹಾಗೂ ಕಾರ್ಯದರ್ಶಿಗೆ ತಿಳಿಸಿದ ಹಿನ್ನೆಲೆಯಲ್ಲಿ ಕಳೆದ ವಾರದ ನಡೆದ ಆಡಳಿತ ಮಂಡಳಿ ಸಭೆ ಮೊದಲ ಅಜೆಂಡಾವಾಗಿ ಈ ವಿಷಯದ ಕುರಿತು ಚರ್ಚೆ ನಡೆಸಿ ಔಷಧಿ ತಲುಪಿಸಲು ಕ್ರಮ ಕೈಗೊಂಡಿದೆ. ಕಳೆದ ವರ್ಷ ೩೦ ಲಕ್ಷ ರೂಪಾಯಿಗಳ ಔಷಧಿ ನೀಡಲಾಗಿದೆ. ಕುಂಬಳೆ ಪಂಚಾಂiiತ್ ಅಧ್ಯಕ್ಷೆ ಯು.ಪಿ. ತಾಹಿರ, ಉಪಾಧ್ಯಕ್ಷ ನಾಸರ್ ಮೊಗ್ರಾಲ್ರ ಪ್ರಯತ್ನದ ಫಲವಾಗಿ ೨ ಲಕ್ಷ ರೂಪಾಯಿಗಳನ್ನು ಈ ವರ್ಷದಲ್ಲಿ ಹೆಚ್ಚುವರಿಯಾಗಿ ನೀಡಲಾಗಿದೆಯೆಂದು ಹೇಳಲಾಗುತ್ತಿದೆ. ಇದರಂತೆ ೩೨ ಲಕ್ಷ ರೂಪಾಯಿಗಳ ಔಷಧಿ ತಲುಪಿಸಿ ವಿತರಿಸಲಾಗಿದೆ. ಇಲ್ಲಿಗೆ ಔಷಧಿ ತಲುಪಿಸಲು ರಾಜ್ಯ ಸರಕಾರ ಹಾಗೂ ಭಾರತೀಯ ಚಿಕಿತ್ಸಾ ಇಲಾಖೆಯ ಸಹಾಯವೂ ಲಭಿಸುತ್ತಿದೆ. ಭಾರತೀಯ ಚಿಕಿತ್ಸಾ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುವ ಸಂಸ್ಥೆಯನ್ನು ೨೦೨೦-೨೧ರಲ್ಲಿ ಆಯುಷ್ ಹೆಲ್ತ್ ಆಂಡ್ ವೆಲ್ನೆಸ್ ಸೆಂಟರ್ ಆಗಿ ಭಡ್ತಿಗೊಳಿಸಿದ ಬಳಿಕ ಜಿಲ್ಲೆ ಹಾಗೂ ಗಡಿಪ್ರದೇಶದ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ತಲುಪುತ್ತಿದ್ದಾರೆ. ಆರೋಗ್ಯ ಕೇಂದ್ರದಲ್ಲಿ ಹೊಸತಾಗಿ ಆರಂಭಿಸಿದ ಹೆಲ್ತ್ ಆಂಡ್ ವೆಲ್ನೆಸ್ ಸೆಂಟರ್ನಲ್ಲಿ ರೆಜಿಮೆಂಟ್ ಥೆರಫಿ ಹಾಗೂ ಫಿಸಿಯೋ ತೆರಫಿಯ ಸೌಲಭ್ಯವೂ ಇದೆ.