ಸ್ಥಳೀಯಾಡಳಿತ ಚುನಾವಣೆ: ಮತದಾರರ ಯಾದಿ ನವೀಕರಿಸಲು 12ರ ವರೆಗೆ ಅವಕಾಶ
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆಯ ಪೂರ್ವಭಾವಿಯಾಗಿ ಮತದಾರರ ಯಾದಿಯಲ್ಲಿ ಹೆಸರು ಸೇರಿಸುವುದಕ್ಕೆ, ತಿದ್ದುಪಡಿ ಮಾಡುವುದಕ್ಕೆ ಇರುವ ಅರ್ಜಿಗಳು, ಆಕ್ಷೇಪಗಳನ್ನು ಸಲ್ಲಿಸಲಿರುವ ದಿನಾಂಕವನ್ನು ಈ ತಿಂಗಳ 12ರವರೆಗೆ ಮುಂದೂಡಲಾಗಿದೆಯೆಂದು ರಾಜ್ಯ ಚುನಾವಣಾ ಆಯುಕ್ತ ಎ. ಶಾಜಹಾನ್ ತಿಳಿಸಿದ್ದಾರೆ. 2025 ಜುಲೈ 23ರಂದು ಕರಡು ಮತದಾರರ ಯಾದಿ ಪ್ರಕಟಿಸಲಾಗಿತ್ತು. ಆರೋ ಪಗಳು, ಅರ್ಜಿಗಳನ್ನು ಸಲ್ಲಿಸಲು ನಿನ್ನೆಯವರೆಗೆ ಸಮಯ ನೀಡಲಾಗಿತ್ತು. 2025 ಜನವರಿ ೧ರಂದು ಅಥವಾ ಅದಕ್ಕಿಂತ ಮುಂಚಿತ 18 ವರ್ಷ ಪೂರ್ತಿಯಾ ದವರಿಗೆ ಮತದಾರರ ಯಾದಿಯಲ್ಲಿ ಹೆಸರು ಸೇರಿಸಬಹುದು. ಮತದಾರರ ಯಾದಿಯಲ್ಲಿ ಹೆಸರು ಸೇರಿಸುವುದಕ್ಕೆ ಫಾರ್ಮ್ 4ರಲ್ಲಿ ಅರ್ಜಿ, ತಿದ್ದುಪಡಿ ನಡೆಸುವುದಕ್ಕೆ ಫಾರ್ಮ್ 6, ಸ್ಥಳ ಬದಲಾವಣೆಗೆ ಫಾರ್ಮ್ 7ರಲ್ಲಿ ರಾಜ್ಯ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಆನ್ಲೈನ್ ಆಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಹೀಯರಿಂಗ್ಗಿರುವ ಕಂಪ್ಯೂಟರ್ ಜನರೇಟೆಡ್ ನೋಟೀಸ್ ಲಭಿಸುವುದು. ಅದರಲ್ಲಿ ತಿಳಿಸಿದ ದಿನಾಂಕದಂದು ಅಗತ್ಯದ ದಾಖಲೆಗಳ ಸಹಿತ ಹೀಯರಿಂಗ್ಗೆ ಹಾಜರಾಗಬೇಕು.
ಗ್ರಾಮ ಪಂಚಾಯತ್ಗಳು, ನಗರಸಭೆಗಳಲ್ಲಿ ಆಯಾ ಸಂಸ್ಥೆಯ ಕಾರ್ಯದರ್ಶಿಗಳು, ಕಾರ್ಪೋರೇಶನ್ಗಳಲ್ಲಿ ಅಡಿಶನಲ್ ಸೆಕ್ರೆಟರಿ ಚುನಾವಣಾ ನೋಂದಾವಣಾ ಅಧಿಕಾರಿಗಳಾಗಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಗಳು ಈ ತಿಂಗಳ 9, 10ರಂದು ತೆರೆದು ಕಾರ್ಯಾಚರಿಸಲಿದೆಯೆಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಮತದಾರರ ಯಾದಿಯನ್ನು ನವೀಕರಿಸಲಿರುವುದರಂಗವಾಗಿ ರಜಾ ದಿನಗಳಲ್ಲೂ ಕಚೇರಿ ಕಾರ್ಯಾಚರಿಸಲಿದೆ.