ಕಾಸರಗೋಡು: ಹೊಸದುರ್ಗ ಮಾವುಂಗಾಲ್ ಮೂಲಕಂಡದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡದಿಂದ ದೂಡಿ ಹಾಕಿದ ಪರಿಣಾಮ ಕೆಳಕ್ಕೆ ಬಿದ್ದು ವ್ಯಾಪಾರಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಕಟ್ಟಡ ಗುತ್ತಿಗೆದಾರನೂ ಪುಲ್ಲೂರು ನಿವಾಸಿಯಾದ ನರೇಂದ್ರನ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಪೊಲೀಸರು ಮನಃಪೂರ್ವಕವಲ್ಲದ ನರಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಸದುರ್ಗ ಮಾವುಂಗಾಲ್ ಮೂಲಕಂಡದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮೂರಂತಸ್ತಿನ ಕಟ್ಟಡದಿಂದ ದೂಡಿ ಹಾಕಿದ ಪರಿಣಾಮ ಕೆಳಕ್ಕೆ ಬಿದ್ದು ಹೊಸದುರ್ಗ ಮಡಿಯನ್‌ನಲ್ಲಿ ಅಲ್ಯುಮಿನಿಯಂ ಸಾಮಗ್ರಿಗಳ ವ್ಯಾಪಾರ ನಡೆಸುವ ಹೊಸದುರ್ಗ ವೆಳ್ಳಿಕೋತ್ ಪೇರಳ ನಿವಾಸಿ ರೋಯ್ ಜೋಸೆಫ್ ಎಳುಪ್ಲಾಕಲ್ (45) ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ನರೇಂದ್ರನ್‌ನನ್ನು ಬಂಧಿಸಲಾಗಿದೆ. ಆಗಸ್ಟ್ 3ರಂದು ಮಧ್ಯಾಹ್ನ 1.30ರ ವೇಳೆ ರೋಯ್ ಜೋಸೆಫ್‌ರನ್ನು ಕಟ್ಟಡದಿಂದ ಕೆಳಕ್ಕೆ ದೂಡಿಹಾಕಿದ ಘಟನೆ ನಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ರೋಯ್ ಜೋಸೆಫ್ ಚಿಕಿತ್ಸೆ ಮಧ್ಯೆ ನಿನ್ನೆ ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.